ಮಂಡ್ಯ :- ಗೃಹ ಜ್ಯೋತಿ ಯೋಜನೆಯಡಿ ಬರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿಯಲ್ಲಿ ಬಿಲ್ ಕಟ್ಟಲಾರದೆ ಬಾಕಿ ಉಳಿಸಿಕೊಂಡಿದ್ದ ಬಡ ಫಲಾನುಭವಿಗಳ 380 ಕೋಟಿ
ವಿದ್ಯುತ್ ಬಿಲ್ ಮನ್ನಾ ಮಾಡಿರುವ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ.ಕಬ್ಬಾಳಯ್ಯ ಸ್ವಾಗತಿಸಿದ್ದಾರೆ.
2013-18 ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ವಿದ್ಯುತ್ ಬಿಲ್ ಅನ್ನು ಭರಿಸಲಾಗದೆ ನೈಜ ಬಡ ಕುಟುಂಬಗಳಿಗೆ ಅವರಿಂದ ಕಟ್ಟಲಾರದಷ್ಟು ವಿದ್ಯುತ್ ಬಿಲ್ಲು ಹೊರೆಯಾಗಿತ್ತು. ಅತ್ಯಂತ ಬಡ ಕುಟುಂಬದ ಪ್ರತಿ ಮನೆಗೆ 60 ರಿಂದ 70 ಸಾವಿರ ಅಧಿಕ ಬಿಲ್ಲು ಬಂದಿದ್ದು, ಕೆಲವು ಮನೆಗಳ ಮೀಟರ್ ಅನ್ನು ಕಿತ್ತುಹಾಕಿದ ಪರಿಣಾಮ ಕಗ್ಗತ್ತಲೆಯಲ್ಲಿ ಬದುಕು ಸವೆಸುತ್ತಿದ್ದರು.
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪಡೆಯಬೇಕಾದರೆ ಬಾಕಿ ಇರುವ ವಿದ್ಯುತ್ ಬಿಲ್ಲನ್ನು ಪಾವತಿ ಮಾಡುವಂತೆ ಸಂಬಂಧಿಸಿದ ವಿದ್ಯುತ್ ನಿಗಮಗಳು ಬಡ ಕುಟುಂಬಗಳಿಗೆ ಒತ್ತಡ ಹೇರುತ್ತಿದ್ದರು. ಈಗ ವಿದ್ಯುತ್ ಬಿಲ್ ಕಟ್ಟಲಾರದೆ ಗೃಹಜ್ಯೋತಿ ಯೋಜನೆಯನ್ನು ಪಡೆಯಲಾರದೆ ಅತಂತ್ರ ಸ್ಥಿತಿಯಲ್ಲಿರುವುದನ್ನು ಮನಗಂಡು ಜಿಲ್ಲಾ ಕಾರ್ಯದರ್ಶಿ ಕೆ.ಕಬ್ಬಾಳಯ್ಯ ವಿದ್ಯುತ್ ಬಿಲ್ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇಂಧನ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಚಿವರಿಗೆ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡುವಂತೆ ದಿ. 4-7-2023 ರಂದು ಮನವಿ ಸಲ್ಲಿಸಲಾಗಿತ್ತು.
ಈ ವಿಷಯವಾಗಿ ದಿ. 7-7-2023 ರಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಗಳಿಗೆ ಪತ್ರ ವ್ಯವಹಾರ ಮಾಡಿ ಅವರ ಗಮನಕ್ಕೂ ತರಲಾಗಿತ್ತು.
ಸೋಮವಾರ ವಿಧಾನ ಸೌಧದಲ್ಲಿ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಬಾಕಿ ಬಿಲ್ ಮನ್ನಾ ಮಾಡುವ ಕ್ರಮ ಕೈಗೊಂಡಿರುವುದು ಸರ್ಕಾರಕ್ಕೆ ಇರುವ ಜನಪರ ಕಾಳಜಿಯನ್ನು ತೋರುತ್ತದೆ ಎಂದು ಕೆ.ಕಬ್ಬಾಳಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಇದರ ಜತೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕಿರು ಸಾಲ ಯೋಜನೆಯಡಿಯಲ್ಲಿ 5 ಸಾವಿರ ರೂ.ಗಳ ಸಾಲವನ್ನು ಪಡೆದಿದ್ದು, ಇದನ್ನು ಸಹ ಮನ್ನಾ ಮಾಡುವ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಜನರಿಗೆ ಅನುಕೂಲ ಕಲ್ಪಿಸಬೇಕು ಮತ್ತು ಮುಂದೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ