ಬೆಂಗಳೂರು: ಇಂದು ವಿಶ್ವ ಮಾದಕ ವಸ್ತು ವಿರೋಧಿ ದಿನ ಇತ್ತೀಚಿನ ವರ್ಷಗಳಲ್ಲಿ ಯುವಕರು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ವಿವಿಧ ಸಂಸ್ಥೆಗಳು ವಿಶ್ವ ಮಾದಕವಸ್ತು ವಿರೋಧಿ ದಿನವನ್ನು ಆಚರಿಸುತ್ತವೆ.
ಜೊತೆಗೆ ಸಮಾಜಕ್ಕೆ ನಿಷೇಧಿತ ಮಾದಕವಸ್ತುಗಳು ಉಂಟುಮಾಡುವ ಪ್ರಮುಖ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಇತಿಹಾಸ
ಯುವ ಸಮೂಹವನ್ನು ಮಾದಕ ದ್ರವ್ಯ ಸೇವನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ 1986ರ ಜೂನ್ 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನು ಆರಂಭಿಸಲಾಯಿತು. ಆದಾದ ಬಳಿಕ ವಿಶ್ವಸಂಸ್ಥೆಯು 1997ರಲ್ಲಿ ‘ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ’ವನ್ನು ಆರಂಭಿಸಿತು. ಕಾನೂನು ಬಾಹಿರ ಚಟುವಟಿಕೆಗಳಿಂದ ಯುವ ಸಮೂಹವನ್ನು ರಕ್ಷಣೆ ಮಾಡುವ ಉದ್ದೇಶವನ್ನು ಈ ದಿನವು ಹೊಂದಿದೆ.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಮಹತ್ವ ಹಾಗೂ ಆಚರಣೆ
ಮಾದಕ ವ್ಯಸನಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ಈ ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳನ್ನು ಹಾಗೂ ಯುವಸಮೂಹವನ್ನು ರಕ್ಷಿಸಲು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ.
ಈ ನಿಟ್ಟಿನಲ್ಲಿ ಈ ದಿನದಂದು ಸಮುದಾಯ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿದಂತೆ ಇನ್ನಿತ್ತರ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಹಾಗೂ ನಾಗರೀಕರಲ್ಲಿ ಮಾದಕ ದ್ರವ್ಯದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೆಮಿನಾರ್ ಗಳು, ಜಾಥಗಳು ಹಾಗೂ ಅಭಿಯಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.