ಬೆಂಗಳೂರು:- ರಾಜಧಾನಿ ಜನರು ಇನ್ಮುಂದೆ ಸ್ವಲ್ಪ ಎಚ್ಚರದಿಂದ ಇರಬೇಕು. ಸುಖಾ ಸುಮ್ಮನೇ ನೀರು ವ್ಯರ್ಥ ಮಾಡುವ ಜನರಿಗೆ ಬಿಸಿ ಮುಟ್ಟಿಸಲು ಜಲಮಂಡಳಿ ಮುಂದಾಗಿದೆ.
ಇನ್ಮುಂದೆ ಬೆಂಗಳೂರು ನಗರದಲ್ಲಿ ನೀರು ವೇಸ್ಟ್ ಮಾಡಿದ್ರೆ ಸ್ಥಳದಲ್ಲೇ ದಂಡ ಬೀಳುತ್ತೆ. ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರನ್ನು ವ್ಯರ್ಥ ಮಾಡೋರಿಗೆ ದಂಡ ಹಾಕಲಾಗುವುದು ಎಂದು ಜಲಮಂಡಳಿ ನಗರದ ಜನತೆಗೆ ಎಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಗೆ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ನೀರು ವ್ಯರ್ಥ ಮಾಡಿದ್ರೆ 5,000 ರೂ. ದಂಡ ವಿಧಿಸೋದಕ್ಕೆ ಮುಂದಾಗಿದೆ.
ಕಳೆದ ಬಾರಿ ಉಂಟಾದ ನೀರಿನ ಅಭಾವ, ಈ ಬಾರಿ ಆಗದಂತೆ ಜಲಮಂಡಳಿ ನೀರು ಉಳಿತಾಯಕ್ಕೆ ಮುಂದಾಗಿದೆ. ಈ ಬಾರಿಯೂ ನೀರು ಪೋಲು ಮಾಡಿದ್ರೆ ದಂಡಾಸ್ತ್ರಕ್ಕೆ ಮುಂದಾಗಿದೆ. ಕಾರು, ಬೈಕ್, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಆಯಾ ವಲಯದ ಜಲಮಂಡಳಿ ಇಂಜಿನಿಯರ್ಸ್ 5 ಸಾವಿರ ರೂ. ದಂಡ ವಿಧಿಸಲಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ ನಿಷೇದಿಸಲಾಗಿದೆ. ಇದರ ಜೊತೆಗೆ ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರನ್ನ ಬಳಸಿದ್ರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.