ಬೆಂಗಳೂರು:- ಕರ್ನಾಟಕ ಕರಾವಳಿಯಲ್ಲಿ ಫೆಂಗಲ್ ಅಬ್ಬರ ಹಿನ್ನೆಲೆ, ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ 2 ದಿನ ಮಳೆ ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ರಕ್ಕಸ ಗಾತ್ರದ ಅಲೆಗಳು ಸಮುದ್ರ ತಟಕ್ಕೆ ಅಪ್ಪಳಿಸುತ್ತಿವೆ. ಮಂಗಳೂರು ಭಾಗದಲ್ಲಿ ಸಮುದ್ರ ಆರೆಂಜ್ ಬಣ್ಣಕ್ಕೆ ತಿರುಗಿದೆ. ಡಿಸೆಂಬರ್ 6ರವರೆಗೆ ಮೀನುಗಾರಿಕೆ ಬಂದ್ ಮಾಡಲಾಗಿದೆ.
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ರಸ್ತೆ ಬದಿ ಕುಸಿದ ಸ್ಥಳದಲ್ಲಿ 15 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಬೈಕ್, ಕಾರು, ಲಾರಿಗಳು ತೆರಳಿದ ಕ್ಷಣಾರ್ಧದಲ್ಲಿ ಕುಸಿತವಾಗಿದ್ದು ದೊಡ್ಡ ಅನಾಹುತ ತಪ್ಪಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅದ್ಯಪಾಡಿಯಲ್ಲಿ ಕೂಡ ಭೂಕುಸಿತವಾಗಿದೆ. ಇನ್ನೆರಡು ದಿನ ಕವಾರಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅತ್ತ ಉಡುಪಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡು ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಫೆಂಗಲ್ ಚಂಡಮಾರುತದ ಎಫೆಕ್ಟ್ನಿಂದರಿಣಾಮ ಉಡುಪಿಯಲ್ಲಿ 109 ಮಿಲಿ ಮೀಟರ್ ಮಳೆ ದಾಖಲಾಗಿದೆ
ಉಡುಪಿ, ಕಾರವಾರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ಗಳು ವಾಪಸ್ ಆಗಿವೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಆಗಲಿದೆ ಅಂತಾಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲೂ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿ ಜನರು ಪರದಾಡಿದ್ದಾರೆ. ಜಿಗಣಿಯ ಕೈಗಾರಿಕಾ ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಕಾರು, ಬೈಕ್ಗಳು ಮುಳುಗಡೆ ಆಗಿದ್ದವು. ದೇವನಹಳ್ಳಿ ಭಾಗದಲ್ಲಿ ಬೆಳೆ ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ.