ಬೆಂಗಳೂರು : ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಜೊತೆ ನಾಗರಿಕರು ಸಹ ಕೈಜೋಡಿಸಿದರೆ ತ್ವರಿತವಾಗಿ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ತಿಳಿಸಿದರು.
ನಗರದಲ್ಲಿ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿಕಾಸಸೌಧ ಸಮ್ಮೇಳನಾ ಕೊಠಡಿ-419ರಲ್ಲಿ ಇಂದು ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು 1980-1990ರಲ್ಲಿ ಯೋಜನಾ ರಹಿತವಾಗಿ ಅಭಿವೃದ್ಧಿಯಾಗುತ್ತಿತ್ತು. ಇದೀಗ ಯೋಜನಾಬದ್ಧವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ವ್ಯವಸ್ಥಿತವಾಗಿ ಅಭಿವೃದ್ಧಿ ಕಾರ್ಯಗಳು ನಡೆಸಿದಾಗ ಹಂತ-ಹಂತವಾಗಿ ಹವಾನಮಾನದಲ್ಲಿ ಪರಿಣಾಮಕಾರಿಯಾಗಿ ಗುಣಮಟ್ಟವನ್ನು ತರುವಲ್ಲಿ ಯಶಸ್ವಿಯಾಗಬಹುದಾಗಿದೆ ಎಂದರು.
ಬೆಂಗಳೂರಿನಲ್ಲಿ ಕಳೆದ 2 ದಶಕಗಳಿಂದ ಕ್ರಮೇಣ ಜನಸಂಖ್ಯೆ ಪ್ರಮಾಣ ಹೆಚ್ಚಾಗುತ್ತಲೇ ಬರುತ್ತಿದೆ. ಅದೇ ರೀತಿ ಕ್ರಮೇಣ ಆರ್ಥಿಕವಾಗಿಯೂ ಸದೃಢವಾಗುತ್ತಿದ್ದು, ದೇಶದಲ್ಲೇ ಅತ್ಯುನ್ನತ ನಗರವಾಗಿದೆ. ಆದರೆ, ನಗರದ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು, ಕಸ, ಸಂಚಾರ ದಟ್ಟಣೆ ಹಾಗೂ ವಾಯು ಗುಣಮಟ್ಟದಲ್ಲಿ ಹಿಂದೆಯಿದ್ದು, ಹವಾಮಾನ ಕ್ರಿಯಾಯೋಜನೆ ಅನುಷ್ಠಾನದ ಮೂಲಕ ಇವೆಲ್ಲಾ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎಂದು ಹೇಳಿದರು.
ಸಿ40 ಸಿಟಿಸ್, ಡಬ್ಲ್ಯೂಆರ್ಐ ಹಾಗೂ ಇತರೆ ನಾಗರಿಕ ಸಮಾಜ ಸಂಸ್ಥೆಗಳು ಸರ್ಕಾರದ ಜೊತೆ ಕೈ ಜೋಡಿಸಿ ನಗರವನ್ನು ಉತ್ತಮ ಗುಣಮಟ್ಟಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಲು ಮುಂದೆ ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ(ಕರ್ನಾಟಕ ರಾಜ್ಯ ಯೋಜನಾ ಮಂಡಳಿ) ಉಪಾಧ್ಯಕ್ಷರಾದ ಶ್ರೀ ರಾಜೀವ್ ಗೌಡ ಮಾತನಾಡಿ, ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಅನುಷ್ಠಾನಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಬೆಂಗಳೂರು ದೇಶದಲ್ಲೇ ಹಾವಾಮಾನ ಗುಣಮಟ್ಟದಲ್ಲಿ ಮೇಲುಗೈ ಸಾಧಿಸಲಿದೆ ಎಂದು ತಿಳಿಸಿದರು.
ನಗರದಲ್ಲಿ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು, ವಾಯು ಗುಣಮಟ್ಟ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಗಳಿಂದ ಕೂಡಿದ್ದು, ಅವೆಲ್ಲವನ್ನೂ ಬಗೆಹರಿಸಬೇಕಿದೆ. ಹವಾಮಾನ ಕ್ರಿಯಾ ಯೋಜನೆಯು ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
ಯೋಜನಾ ರಹಿತ ಅಭಿವೃದ್ಧಿಯಿಂದ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿವೆ.ಅವೆಲ್ಲವನ್ನೂ ನಾವೂ ತಡೆಯಬೇಕಿದ್ದು, ಸರ್ಕಾರವು ಹವಾಮಾನ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು.
ಮುಖ್ಯ ಅಭಿಯಂತರರು ಹಾಗೂ ಮುಖ್ಯ ಪ್ರಧಾನ ವ್ಯವಸ್ಥಾಪಕ(BSWML)ರಾದ ಬಸವರಾಜ್ ಕಬಾಡೆ ಮಾತನಾಡಿ, ಭಾರತ ದೇಶದಲ್ಲಿ ಮುಂಬೈ ಮತ್ತು ಚನ್ನೈ ನ ನಂತರ ಹವಾಮಾನ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿದ 3ನೇ ನಗರ ನಮ್ಮ ಬೆಂಗಳೂರಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಹವಾಮಾನ ಕ್ರಿಯಾ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಅನಷ್ಠಾನ ಮಾಡಬೇಕಾದಲ್ಲಿ ನಗರದ ಮಾಸ್ಟರ್ ಪ್ಲಾನ್ ನೊಂದಿಗೆ ಸಂಯೋಜಿಸಿಕೊಳ್ಳಬೇಕಾಗಿರುತ್ತದೆ ಎಂದರು.
ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯ ಕಾರ್ಯಗಾರದ ಕುರಿತು:
ಭಾರತದಲ್ಲಿ ಐದನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಸಮೂಹವಾಗಿರುವ ಬೆಂಗಳೂರು, 2017 ರಿಂದ ಸಿ40 ನಗರವಾಗಿದ್ದು, ಸಿ40 ರ ನಾಯಕತ್ವ ಮಾನದಂಡಗಳ ಭಾಗವಾಗಿ ವೇಗವರ್ಧಿತ ಹವಾಮಾನ ಕ್ರಿಯೆಗೆ ಬದ್ಧವಾಗಿದೆ. ಇದರ ಅವಿಭಾಜ್ಯ ಅಂಗವಾಗಿ, ಬೆಂಗಳೂರು ಈಗ ತನ್ನ ಹವಾಮಾನ ಕ್ರಿಯಾ ಯೋಜನೆಯನ್ನು(BCAP) ಪ್ರಕಟಿಸಿದೆ.
ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯು 2019-2020ರ GHG(Greenhouse Gases) ಆಧರಿಸಿದ ಡೇಟಾ ಚಾಲಿತವಾಗಿದ್ದು, ಇದು 2030ರ ವೇಳೆಗೆ ಶೇ. 16, 2040ರ ವೇಳೆಗೆ ಶೇ. 26, ಮತ್ತು 2050ರ ವೇಳೆಗೆ ಶೇ. 56 ವೇಳೆಗೆ ತಟಸ್ಥ ಇಂಗಾಲ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೊಂದುವ ಗುರಿಯೊಂದಿದೆ. ವಿಸ್ತೃತ ಸನ್ನಿವೇಶಕ್ಕೆ ಅನುಗುಣವಾಗಿ 2050ರ ವೇಳೆಗೆ(2030ರ ವೇಳೆಗೆ ಶೇ. 34, 2040ರ ವೇಳೆಗೆ ಶೇ. 58 ಮತ್ತು 2050ರ ವೇಳೆಗೆ ಶೇ. 91ಕ್ಕೆ ತಟಸ್ಥ ಗೊಳಿಸು ಗುರಿ ಹೊಂದಲು ಶ್ರಮವಹಿಸಿ ಕಾರ್ಯನಿರ್ವಹಿಸಲಾಗುವುದು).
ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯ ಒಂದು ನಿರ್ಣಾಯಕ ಅಂಶವೆಂದರೆ ತಕ್ಷಣದ ಮತ್ತು ಭವಿಷ್ಯದ ಹವಾಮಾನ ಅಪಾಯಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಾಗಿದೆ. ಜೊತೆಗೆ ಮುಂಚೂಣಿಯಲ್ಲಿ ಉದ್ಯೋಗಗಳನ್ನು ರಚಿಸುವ ಮೂಲಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆಯನ್ನು ತರುವ ಮೂಲಕ ಅಂತರ್ಗತ ಹವಾಮಾನ ಕ್ರಮಗಳನ್ನು ಪರಿಹರಿಸುವುದು.
ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯನ್ನು ರಾಷ್ಟ್ರೀಯ, ರಾಜ್ಯ ಮತ್ತು ನಗರ ನೀತಿಗಳು ಮತ್ತು ಕ್ರಮಗಳೊಂದಿಗೆ ಒಮ್ಮತ, ಸಹಯೋಗ ಮತ್ತು ಸುಸಂಬದ್ಧತೆಯ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಿ40 ಸಿಟೀಸ್ ಮತ್ತು ಡಬ್ಲ್ಯುಆರ್ಐ ಇಂಡಿಯಾದಿಂದ ವ್ಯೂಹಾತ್ಮಕ ಬೆಂಬಲದೊಂದಿಗೆ ಹಲವಾರು ಪರಿವರ್ತನೆಯನ್ನು ಸಕ್ರಿಯಗೊಳಿಸಲು ಸಹಕಾರಿಯಾಗಲಿದೆ.
ಕಾರ್ಯಗಾರದಲ್ಲಿ ಹವಾಮಾನ ವೈಪರಿತ್ಯ ಘಟಕದ ಅಧ್ಯಕ್ಷರು ಹಾಗೂ ಅರಣ್ಯ/ಕೆರೆಗಳ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಿ40 ಸಿಟಿಸ್ ನ ಪ್ರಾದೇಶಿಕ ನಿರ್ದೇಶಕಿಯಾದ ಶೃತಿ ನಾರಾಯಣ್, ಅಭಿವೃದ್ಧಿ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.