ಅಂತಾರಾಷ್ಟ್ರೀಯ ವೈಟ್ ಬಾಲ್ ಕ್ರಿಕೆಟ್ನಲ್ಲಿ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಟ ಇನ್ನು ಮುಗಿದಿಲ್ಲ. ಅತಿಯಾದ ಆಟದ ಹೊರೆ ಕಾರಣ ಇಂಗ್ಲೆಂಡ್ ಪರ ವೈಟ್ ಬಾಲ್ ಕ್ರಿಕೆಟ್ಗೆ ಬೆನ್ ಸ್ಟೋಕ್ಸ್ ವಿದಾಯ ಹೇಳಿದ್ದರು. ಆದರೆ, ತಮ್ಮ ಈ ನಿರ್ಧಾರಕ್ಕೆ ಆಲ್ರೌಂಡರ್ ಯೂಟರ್ನ್ ಹೊಡೆದಿದ್ದು, ಮತ್ತೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಇಂಗ್ಲೆಂಡ್ಗೆ ಯಶಸ್ಸು ತಂದುಕೊಡುವ ಬಯಕೆ ಹೊರಹಾಕಿದ್ದಾರೆ. ಅಂದಹಾಗೆ 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಬೆನ್ ಸ್ಟೋಕ್ಸ್ ಮಹತ್ವದ ಪಾತ್ರ ವಹಿಸಿದ್ದರು.
ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಈಗ ಮಹತ್ವದ ಬದಲಾವಣೆ ಆಗುತ್ತಿದೆ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಬ್ರೆಂಡನ್ ಮೆಕಲಮ್ ಈಗ ಮುಖ್ಯ ಕೋಚ್ ಆಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಪರ ಮತ್ತೆ ವೈಟ್ ಬಾಲ್ ಕ್ರಿಕೆಟ್ ಆಡುವ ಬಯಕೆ ಹೊರಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಝ್ಬಾಲ್ ಶೈಲಿಯ ಕ್ರಿಕೆಟ್ ಮೂಲಕ ಮೆಕಲಮ್ ಮತ್ತು ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಭಾರಿ ಯಶಸ್ಸು ತಂದಿದ್ದಾರೆ. ಈಗ ವೈಟ್ಬಾಲ್ ಕ್ರಿಕೆಟ್ನಲ್ಲೂ ಈ ಜೋಡಿ ಜೊತೆಯಾಗುವ ಸಾಧ್ಯತೆ ಇದೆ.
“ಮತ್ತೊಮ್ಮೆ ಇಂಗ್ಲೆಂಡ್ ಪರ ವೈಟ್ ಬಾಲ್ ಕ್ರಿಕೆಟ್ ಆಡುವಿರೇ? ಎಂದು ಕರೆ ಬಂದರೆ ಖಂಡಿತಾ ಹೌದು ಎಂದು ಹೇಳುತ್ತೇನೆ,” ಎಂದು ಸ್ಕೈ ಸ್ಪೋರ್ಟ್ಸ್ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹೇಳಿಕೊಂಡಿದ್ದಾರೆ. ಕಳೆದ ತಿಂಗಳು ನಡೆದ ದಿ ಹಂಡ್ರೆಡ್ ಟೂರ್ನಿಯಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ ಬೆನ್ ಸ್ಟೋಕ್ಸ್, ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಈಗ ಅಕ್ಟೋಬರ್ನಲ್ಲಿ ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸದಲ್ಲಿ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಹಿಂದಿರುಗಲು ಎದುರು ನೋಡುತ್ತಿದ್ದಾರೆ.