ಬೆಂಗಳೂರು:- ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್ ಗೆ ಸಂಬಂಧಿಸಿದಂತೆ ಮಹಿಳೆಯ ನೆರವಿಗೆ ಯಾರು ಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಘಟನೆ ಕುರಿತಂತೆ ಪ್ರಸ್ತಾಪಿಸಿದ ನ್ಯಾಯಪೀಠ, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣಾ ಇದ್ದ. ಇದು ದುಶ್ಯಾಸನರ ಕಾಲವಾಗಿದೆ. ಮಹಿಳೆ ನೆರವಿಗೆ ಯಾರೂ ಬಂದಿಲ್ಲ. ನಮ್ಮಲ್ಲಿ ಕಾನೂನಿನ ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ. ಸ್ವಾತಂತ್ರ್ಯ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಬಡ ಜನತೆಗೆ ರಕ್ಷಣೆ ಬೇಕಾಗಿದೆ. ಬದಲಾಗಿ ಇಂತಹ ಸಮಾಜದಲ್ಲಿ ಬದುಕುವುದಕಿಂತ ಸಾಯುವುದು ಮೇಲು ಎಂಬ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿತು.
ಮಗ ಮಾಡಿದ ತಪ್ಪಿಗೆ ತಾಯಿಗೆ ಶಿಕ್ಷೆ ನೀಡಲಾಗಿದೆ. ಮಗನನ್ನು ಹೆತ್ತಿದ್ದೆ ಆ ತಾಯಿಯ ತಪ್ಪಾ?, ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆಗಳ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಈ ಸಂದರ್ಭದಲ್ಲಿ ಸಂತ್ರಸ್ತೆ ಎದುರಿಸಿರಬಹುದಾದ ನೋವು ಊಹಿಸಲಾಗುವುದಿಲ್ಲ ಎಂದು ಪೀಠ ತಿಳಿಸಿತು.