ಬೆಂಗಳೂರು/ಬೆಳಗಾವಿ:- ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಹತ್ತು ದಿನಗಳ ಅಧಿವೇಶನದಲ್ಲಿ ವಕ್ಫ್, ಬಾಣಂತಿಯರ ಸಾವು ಮತ್ತಿತರ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಡಿಸೆಂಬರ್ 14ರವರೆಗೂ ಭಾರೀ ಮಳೆ!
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಬಾಣಂತಿಯರ ಸಾವು, ಶಿಶುಗಳ ಸಾವು, ವಕ್ಫ್ ವಿವಾದ, ಮುಡಾ ಅಕ್ರಮ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ, ಹೀಗೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಲು ಸಾಲು ಬಾಣಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ
ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೊನಾ ಹಗರಣದ ಪ್ರತ್ಯಸ್ತ್ರ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ. ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ. ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸಾವನ್ನು ಪ್ರಸ್ತಾಪಿಸಲು ಬಿಜೆಪಿ ಸಜ್ಜಾಗಿದೆ. ಮೃತರ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರದ ಜೊತೆಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದೆ. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತ್ಯಸ್ತ್ರ ರೆಡಿ ಮಾಡಿಕೊಂಡಿದ್ದು, ಕೇಂದ್ರದ ಲ್ಯಾಬೋರೇಟರಿ ನೀಡಿದ ಸ್ಯಾಂಪಲ್ನಿಂದ ಹೀಗಾಯಿತು ಎಂದು ಆರೋಪಿಸಲು ಸಜ್ಜಾಗಿದೆ. 22 ಬ್ಯಾಚ್ಗಳ IV ಸ್ಯಾಂಪಲ್ಸ್ ರಿಜೆಕ್ಟ್ ಆಗಿತ್ತು. ಆದರೆ, ಇದೇ ಐವಿಗಳು ಕೇಂದ್ರದ ಲ್ಯಾಬೋರೇಟರಿಗಳಲ್ಲಿ ಪಾಸ್ ಆಗಿದ್ದವು ಎಂದು ಕೌಂಟರ್ ಕೊಡಲು ರೆಡಿಯಾಗಿದೆ.
ಇದಿಷ್ಟೇ ಅಲ್ಲ, ವಾಲ್ಮೀಕಿ ನಿಗಮ, ಮುಡಾ ಅಕ್ರಮ ವಿಷಯವನ್ನು ಕೂಡ ಬಿಜೆಪಿ ಸದನದಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಇದೆ.