ಬೆಂಗಳೂರು:- ಬಸವನಗುಡಿ ಕಡ್ಲೆಕಾಯಿ ಪರಿಷೆಯಲ್ಲಿ ತುತ್ತೂರಿ ಸೌಂಡ್ ನಿಲ್ಲಿಸಿ ಎಂದು ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ. ಈ ಬಾರಿಯ ಪರಿಷೆ ಡಿಸೆಂಬರ್ 9 ರಿಂದ 11ರ ತನಕ ನಡೆಯಲಿದೆ.
ಬಸವನಗುಡಿ ಕಡ್ಲೆಕಾಯಿ ಪರಿಷೆ ಅಧಿಕೃತವಾಗಿ ನಡೆಯುವುದು ಮೂರು ದಿನ. ಆದರೆ ಒಂದು ವಾರದ ಮುಂಚಿನಿಂದ ಅಂಗಡಿಗಳು ಬರುತ್ತವೆ. ನೂರಾರು ಕಡ್ಲೆಕಾಯಿ ವ್ಯಾಪಾರಸ್ಥರು ಆಗಮಿತ್ತಾರೆ. ಇದರ ಜೊತೆಗೆ ವಿವಿಧ ವಸ್ತುಗಳ ಮಾರಾಟದ ಅಂಗಡಿಯೂ ಬರುತ್ತದೆ. ಅದರಲ್ಲಿ ತುತ್ತೂರಿಯೂ ಒಂದು.
ತುತ್ತೂರಿಯ ಸೌಂಡ್ ನಿಲ್ಲಿಸಿ ಬುಲ್ ಟೆಂಪಲ್ ರಸ್ತೆಯಲ್ಲಿ ಚುಮು ಚುಮು ಚಳಿಯ ನಡುವೆ ಸಾವಿರಾರು ಜನರ ನಡುವೆ ಕಡ್ಲೆಕಾಯಿ ತಿನ್ನುತ್ತಾ ತುತ್ತೂರಿ ಊದುತ್ತಾ ಹೋಗುವ ಜನರಿದ್ದಾರೆ. ಇದು ಹಲವರಿಗೆ ಸಂತೋಷ ನೀಡುತ್ತದೆ. ಆದರೆ ಇದರ ಶಬ್ದವೇ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ತಂದಿದೆ.
ಹಲವು ವರ್ಷಗಳಿಂದಲೂ ತುತ್ತೂರಿ ಮಾರಾಟಕ್ಕೆ ತಡೆ ಹಾಕಬೇಕು ಎಂಬ ಬೇಡಿಕೆ ಇದೆ. ಈಗ ಮತ್ತೆ ಕಡ್ಲೆಕಾಯಿ ಪರಿಷೆ ಎದುರಾಗಿದೆ. ಆದ್ದರಿಂದ ಬಸವನಗುಡಿ ನಿವಾಸಿಗಳ ಹಿತರಕ್ಷಣಾ ವೇದಿಕೆ ತುತ್ತೂರಿ ಸೌಂಡ್ ನಿಲ್ಲಿಸಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವಕರು, ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರು, ಮಕ್ಕಳು ತುತ್ತೂರಿ ಊದುತ್ತಾ ಸಾಗುತ್ತಾರೆ. ಬಸನವಗುಡಿಯಲ್ಲಿ ಕೊಂಡ ತುತ್ತೂರಿ ಶಬ್ದ ಇತರ ಬಡಾವಣೆಗಳಲ್ಲಿಯೂ ಕೇಳಿ ಬರುತ್ತದೆ. ಇದು ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ.
ತುತ್ತೂರಿ ಬಳಕೆಯಿಂದ ಶಬ್ದ ಮಾಲಿನ್ಯವಾಗುತ್ತದೆ. ವೃದ್ಧರು, ಹೃದ್ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕಡ್ಲೆಕಾಯಿ ಪರಿಷೆಯಲ್ಲಿ ತುತ್ತೂರಿಯ ಶಬ್ಧವನ್ನು ನಿಲ್ಲಿಸಿ, ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಿ ಎಂದು ಬಸವನಗುಡಿ ನಿವಾಸಿಗಳ ಹಿತರಕ್ಷಣಾ ವೇದಿಕೆ ಪೊಲೀಸರಿಗೆ ದೂರು ನೀಡಿದೆ.
ಪೊಲೀಸರು ಸಹ ದೂರು ಸ್ವೀಕಾರ ಮಾಡಿದ್ದು, ಈ ಬಾರಿ ತುತ್ತೂರಿ ಮಾರಾಟ, ಊದುವುದಕ್ಕೆ ಖಂಡಿತ ತಡೆ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಬಾರಿಯ ಕಡ್ಲೆಕಾಯಿ ಪರಿಷೆ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಬುಲ್ ಟೆಂಪಲ್ ರಸ್ತೆಯಲ್ಲಿ ಅಂಗಡಿಗಳ ಜಮಾವಣೆ ಆರಂಭವಾಗಿದೆ. ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕಿದೆ.