ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡಿಯನ್ ಇಂಟರ್ನ್ಯಾಷನಲ್ ಟ್ರೇಡ್ ಫೇರ್ ಮೇಳದಲ್ಲಿ ವಿಜಯಪುರ ಬಂಜಾರ ಕಸೂತಿ ಆರ್ಗನೈಸೇಷನ್ ಮಳಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಂನಲ್ಲಿ ನಡೆಯುತ್ತಿರುವ ಐಐಟಿಎಫ್ ನಲ್ಲಿನ ವಿಜಯಪುರ ಜಿಲ್ಲೆಯ `ಬಂಜಾರ ಕಸೂತಿ ಆರ್ಗನೈಸೇಷನ್’ ಮಳಿಗೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿವ ಎಂ.ಬಿ.ಪಾಟೀಲ ಪತ್ನಿ ಆಶಾ ಪಾಟೀಲ್ ಇದರ ನೇತೃತ್ವ ವಹಿಸಿದ್ದು, ಬಂಜಾರ ಕಸೂತಿ ಮಳಿಗೆಯು 2 ಲಕ್ಷ ರೂ.ಗಳಷ್ಟು ವಹಿವಾಟು ನಡೆಸಿದೆ. ಲಂಬಾಣಿ ಕರಕುಶಲ ಮತ್ತು ಕೈಮಗ್ಗದ ವಸ್ತುಗಳೆಂದರೆ ಕೇವಲ ರಾಜಸ್ಥಾನ ಮತ್ತು ಉತ್ತರ ಭಾರತದ್ದು ಎನ್ನುವುದನ್ನು ಮೀರಿ, ಈ ಮಳಿಗೆ ಗ್ರಾಹಕರನ್ನು ಸೆಳೆದಿದೆ. ಇದೇ 14ರಂದು ಆರಂಭವಾಗಿರುವ ಐಐಟಿಎಫ್ ಮೇಳವು ನ.27ರವರೆಗೆ ನಡೆಯಲಿದ್ದು, ಉಳಿದ ಒಂಬತ್ತು ದಿನಗಳಲ್ಲಿ ರಾಷ್ಟ್ರ ರಾಜಧಾನಿಯ ಇನ್ನೂ ಹೆಚ್ಚಿನ ಜನರನ್ನು ಮಳಿಗೆಯು ಆಕರ್ಷಿಸಲಿದೆ.
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಲಂಬಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲ ಈ ಸಮುದಾಯದವರು ಹೆಚ್ಚಾಗಿದ್ದು, ಇವರ ಸಾಂಪ್ರದಾಯಿಕ ಕಸೂತಿ ಮತ್ತು ಕರಕುಶಲ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಸಬಲೀಕರಣಗೊಳಿಸಬೇಕಾಗಿದೆ. ಈ ಉದ್ದೇಶದಿಂದ ಬಂಜಾರ ಕಸೂತಿ ಆರ್ಗನೈಸೇಷನ್ ಅನ್ನು ಸ್ಥಾಪಿಸಿ, ಉತ್ತೇಜಿಸಲಾಗುತ್ತಿದೆ ಎಂದು ಆಶಾ ಪಾಟೀಲ್ ಹೇಳಿದ್ದಾರೆ.