ಬೆಂಗಳೂರು:– ನ.29ರಿಂದ ಡಿ.1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ವಾರ್ಷಿಕ ಜಾಗತಿಕ ತಂತ್ರಜ್ಞಾನ ಕಾರ್ಯಕ್ರಮವಾದ ‘ಬೆಂಗಳೂರು ಟೆಕ್ ಸಮ್ಮಿಟ್’ ನ.29ರಿಂದ ಡಿ.1ರವರೆಗೆ ನಗರದ ಅರಮನೆ ಮೈದಾನದಲ್ಲಿ ಜರುಗಲಿದೆ.ರಾಜ್ಯ ಸರಕಾರದ ಆಯೋಜನೆಯ ಈ ಸಮ್ಮಿಟ್ ನಲ್ಲಿ ಈ ವರ್ಷ, ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ ಇರಲಿದೆ.
ಈ ಮಳಿಗೆಯಲ್ಲಿ ಭಾರತದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡುವ ಉದ್ದೇಶವಿದೆ ಎಂದರು.
ಸಮ್ಮಿಟ್ ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್ಟೆಕ್, ಮೆಟಾವರ್ಸ್ ಮತ್ತು ವೆಬ್ 3.0, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಆನಿಮೇಶನ್, ವಿಶುವಲ್ ಎಫೆಕ್ಟ್, ಗೇಮಿಂಗ್, ಟೆಲಿಕಾಮ್ ಮತ್ತು 6ಜಿ ತಂತ್ರಜ್ಞಾನಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನವು ಟೆಕ್ ಸಮ್ಮಿಟ್ ನಲ್ಲಿ ಈ ವರ್ಷದ ‘ಬ್ರೇಕಿಂಗ್ ಬೌಂಡರೀಸ್’ ಎಂಬ ಗುರಿಗೆ ಅನುಗುಣವಾಗಿರಲಿದ್ದು, ಆವಿಷ್ಕಾರ, ಪರಿವರ್ತನೆ ಹಾಗೂ ಅನ್ವೇಷಣೆಯ ಹಾದಿಯಲ್ಲಿ ಸಾಗಲಿದೆ ಎಂದು ಅವರು ತಿಳಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವಕ್ಕೂ ಈ ಪ್ರದರ್ಶನ ಸಾಕ್ಷಿಯಾಗಲಿದೆ. ಜೊತೆಗೆ ಬಾಹ್ಯಾಕಾಶ ಸಂಶೋಧನೆಗೆ ಇಸ್ರೋ ನೀಡುತ್ತಿರುವ ಗಣನೀಯ ಕೊಡುಗೆಗಳ ಪ್ರದರ್ಶನವೂ ಇಲ್ಲಿ ಕಂಡುಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಖಾಸಗಿ ಉದ್ಯಮಗಳು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ವಹಿಸಿದ ಪಾತ್ರವನ್ನು ‘ಚಂದ್ರಯಾನ’ ಹೆಸರಿನ ಮಳಿಗೆ ಪ್ರದರ್ಶಿಸಲಿದೆ. ಈ ಪ್ರದರ್ಶನದ ಮೂಲಕ, ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿಯವರ ಹೂಡಿಕೆಗೆ ಉತ್ತೇಜನ ನೀಡುವ ಸರಕಾರದ ಪ್ರಯತ್ನಕ್ಕೆ ಬಿಟಿಎಸ್-2023 ನೆರವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.