ಸರಕು ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್ನ ಸೇತುವೆ ಕುಸಿದ ಅವಘಡದಲ್ಲಿ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದು ಇದುವರೆಗೂ ಅವರ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಮೇರಿಲ್ಯಾಂಡ್ ರಾಜ್ಯದ ಪೊಲೀಸ್ ಸೂಪರಿಂಟೆಂಡೆಂಟ್ ಕರ್ನಲ್ ರೋಲ್ಯಾಂಡ್ ಆರ್. ಬಟ್ಲರ್ ಜೂನಿಯರ್ ತಿಳಿಸಿದರು.
ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಸರಕು ಸಾಗಣೆ ಹಡಗು ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆಯ ಆಧಾರಸ್ತಂಭಕ್ಕೆ ಮಂಗಳವಾರ ಡಿಕ್ಕಿ ಹೊಡೆದಿದೆ. ಈ ವೇಳೆ ಸೇತುವೆ ಮೇಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಆರು ಕಾರ್ಮಿಕರು ನಿರತರಾಗಿದ್ದು, ಸೇತುವೆ ಕುಸಿಯುತ್ತಿದ್ದಂತೆ ಅವರೆಲ್ಲಾ ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದವರ ಯಾರ ದೇಹಗಳನ್ನೂ ಪತ್ತೆಹಚ್ಚಲು ಅಗ್ನಿಶಾಮಕ ದಳದವರೂ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಸಾಧ್ಯವಾಗಿಲ್ಲ.
‘ದೀರ್ಘ ಕಾಲ ಈಜುಗಾರರು ಸತತವಾಗಿ ಪ್ರಯತ್ನಿಸಿದರೂ ಯಾರ ದೇಹಗಳೂ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಆರೂ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದೇವೆ. ಕಾರ್ಮಿಕರ ಹೊರತಾಗಿ ಬೇರೆಯವರು ನೀರಿನಲ್ಲಿ ಮುಳುಗಿರುವುದರ ಕುರಿತು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದೂ ಎಂದು ಕರ್ನಲ್ ರೋಲ್ಯಾಂಡ್ ಹೇಳಿದ್ದಾರೆ.
‘ಅಮೆರಿಕದ ಮೂಲಸೌಕರ್ಯ ಪರಂಪರೆಯ ಮುಖ್ಯ ರಚನೆಯಾಗಿದ್ದ ಬಾಲ್ಟಿಮೋರ್ನ ಸೇತುವೆಯನ್ನು ಮರು ನಿರ್ಮಾಣ ಮಾಡುವ ಹಾದಿ ಸುಲಭವಿಲ್ಲ. . ಅವಘಡ ಸಂಭವಿಸಿದ ಸ್ಥಳಕ್ಕೆ ಹೊಂದಿಕೊಂಡ ಬಂದರಿಗೆ ಹಡಗುಗಳು ಬರುವುದು ಮತ್ತು ಅಲ್ಲಿಂದ ಹೋಗುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಅವಘಡ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಹಡಗಿನಲ್ಲಿದ್ದ ಸಿಬ್ಬಂದಿ ನೀಡಿದ ಸಂದೇಶದಿಂದ ಸೇತುವೆ ಮೇಲೆ ವಾಹನಗಳು ಸಂಚರಿಸದಂತೆ ಕ್ಷಿಪ್ರವಾಗಿ ತಡೆಯಲು ಸಾಧ್ಯವಾಯಿತು. ಇದರಿಂದ ಅಸಂಖ್ಯಾತ ಜೀವಗಳನ್ನು ಉಳಿಸಿದಂತಾಯಿತು. ಹಡಗಿನಲ್ಲಿ ಇದ್ದ ಸಿಬ್ಬಂದಿಯ ಕೆಲಸ ಶ್ಲಾಘನೀಯ ಎಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದರು.
ಪೈಲಟ್ಗಳೂ ಸೇರಿ ಹಡಗಿನಲ್ಲಿ ಇದ್ದ 22 ಸಿಬ್ಬಂದಿ ಭಾರತೀಯರು. ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಒಬ್ಬರಿಗೆ ಅವಘಡದಿಂದಾಗಿ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ಹಡಗು ನಿರ್ವಹಣಾ ಕಂಪನಿ ಸಿನರ್ಜಿ ಮರೀನ್ ಗ್ರೂಪ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.