ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಮಂದಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಪ್ರತಿಕ್ರಿಯಿಸಿದ್ದಾರೆ. ದೇವಸ್ಥಾನದಲ್ಲಿ ದೇವರ ಹೂ ಪ್ರಸಾದ ಹಿಡಿದ ಫೋಟೋ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ದರ್ಶನ್ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ದೇವಸ್ಥಾನದಲ್ಲಿ ದೇವರ ಹೂ ಪ್ರಸಾದ ಹಿಡಿದ ಫೋಟೋ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ. ದೇವರಿಗೆ ಪ್ರಾರ್ಥನೆ ಫಲಿಸಿತು ಎಂಬ ಅರ್ಥದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ದರ್ಶನ್ ಪರ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರು, ದರ್ಶನ್ ಅವರದ್ದು ರೇಣುಕಾ ಸ್ವಾಮಿ ಕೊಲೆಯಲ್ಲಿ ಪಾತ್ರವಿಲ್ಲ ಎಂದು ವಾದಿಸಿದ್ದರು. ಪೊಲೀಸರು ಕೆಲವು ಉತ್ಪ್ರೇಕ್ಷಿತ ಆರೋಪಗಳನ್ನು ದರ್ಶನ್ ವಿರುದ್ಧ ಮಾಡಿದ್ದಾರೆ ಎಂದು ವಾದಿಸಿದ್ದರು. ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು ದರ್ಶನ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಜೊತೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ, ಪ್ರದೋಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಜಗದೀಶ್ ಅವರಿಗೂ ಜಾಮೀನು ದೊರೆತಿದೆ.
ಅನಾರೋಗ್ಯದ ಕಾರಣ ನೀಡಿ ಈಗಾಗಲೇ ಮಧ್ಯಂತರ ಜಾಮೀನನ್ನ ದರ್ಶನ್ ಪಡೆದಿದ್ದಾರೆ. ಇನ್ನು ಇಂದು ಜಾಮೀನು ಪಡೆದ ಪ್ರಕರಣದ ಇತರೆ ಆರೋಪಿಗಳು ಸೋಮವಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಪವಿತ್ರಾ ಗೌಡ ಸಹ ಸೋಮವಾರವೇ ಜೈಲಿನಿಂದ ಹೊರಬರಲಿದ್ದಾರೆ.