ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಇದೇ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯ ಟಿಎ ಶರವಣ ಅವರು ಮಾತನಾಡಿ, ಮಾಜಿ ಮಂತ್ರಿ, ಜೆಡಿಎಸ್ ಹಿರಿಯ ನಾಯಕ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡುವ ಮೂಲಕ, ಸತ್ಯ, ನಿಷ್ಠೆಗೆ ಜಯ ಸಿಕ್ಕಿದೆ ಎಂದರು.
ರೇವಣ್ಣ ಅವರನ್ನು ಅನಗತ್ಯವಾಗಿ ಸಿಕ್ಕು ಹಾಕಿಸಲೆಂದೇ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದ್ದು, ನ್ಯಾಯಾಲಯದ ಜಾಮೀನು ಇದನ್ನು ವಿಫಲಗೊಳಿಸಿದೆ ಎಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಹೇಳಿದ್ದಾರೆ.
ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಶರವಣ ಯಾವತ್ತೂ ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ಪ್ರಕರಣ ಪ್ರತ್ಯೇಕವಾಗಿದ್ದು, ಈ ನೆಲದ ಕಾಯಿದೆಯಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆದರೆ ಯಾವುದೂ ಅಡ್ಡಿಯಲ್ಲ.ಆದರೆ ನಿರ್ದೋಷಿ ರೇವಣ್ಣ ಅವರನ್ನು ಈ ವಿವಾದದಲ್ಲಿ ಸಿಕ್ಕಿಸಲಾಯಿತು. ಮಾನಸಿಕವಾಗಿ ಹಿಂಸೆ ನೀಡಲಾಯಿತು. ಅವರ ತೇಜೋವಧೆಗೆ ಸಂಚು ರೂಪಿಸಲಾಯಿತು. ಅವರ ವಿರುದ್ಧ ಸುಳ್ಳು ಮೊಕದ್ದಮೆ ಹಾಕಲಾಯಿತು ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಶಕಗಳ ರಾಜಕಾರಣದಲ್ಲಿ ರಾಜ್ಯಕ್ಕೆ ಅದರಲ್ಲೂ ಹಾಸನ ಜಿಲ್ಲೆಗೆ ರೇವಣ್ಣ ಕೊಡುಗೆ ಅಪಾರ. ಅದರಲ್ಲೂ ಹಾಲು ಉತ್ಪಾದಕ ಕ್ಷೇತ್ರದಲ್ಲಿ ರೇವಣ್ಣ ತಂದಿರುವ ಸುಧಾರಣೆ ಇಡೀ ಭಾರತದಲ್ಲೇ ಮಾದರಿ. ಇಂಥ ನಾಯಕರ ತೇಜೋವಧೆ ಮಾಡುವ ಮಟ್ಟಿಗೆ ಕಾಂಗ್ರೆಸ್ ನಾಯಕರು ನೀಚ ರಾಜಕಾರಣ ಮಾಡಿರುವುದು ಹೇಯ. ಇಷ್ಟು ಕೆಲ ಹಂತಕ್ಕೆ ಹೋಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಶರವಣ ಹರಿಹಾಯ್ದರು.
ರೇವಣ್ಣ ಅವರ ಬಿಡುಗಡೆ ಹರ್ಷ ತಂದಿದೆ. ನ್ಯಾಯಾಲಯದ ಷರತ್ತುಗಳನ್ನು ಅವರು ಪರಿಪಾಲನೆ ಮಾಡಲಿದ್ದಾರೆ ಎಂದು ಶರವಣ ಆಶಯ ವ್ಯಕ್ತಪಡಿಸಿದ್ದಾರೆ.