ಬೀದರ್ (ಡಿ.25): ಕನಕ ಗುರು ಪೀಠ ತಿಂಥಿಣಿ ಬ್ರಿಡ್ಜ್ ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಪುರಿ ಮಹಾ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಚಿಕ್ಕಲಿಂಗ ಬೀರದೇವರು, ಉಚ್ಚಾದ ಬೀರಲಿಂಗೇಶ್ವರ ಪಟ್ಟದ ದೇವರು ಮಠದ ಬಾಲ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗೋಪಾಲ ಮುತ್ಯಾರು ಸೇರಿದಂತೆ ಅನೇಕ ಜನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗದಲ್ ಗ್ರಾಮದಲ್ಲಿ ಮಂಗಳವಾರ ಸಂಜೆ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿ ಅನಾವರಣ ಹಾಗೂ 537ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ನೂತನವಾಗಿ ಪ್ರತಿಷ್ಠಾಪಿಸಿದ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಕನಕದಾಸರು 78 ಹಳ್ಳಿಗಳ ಪಾಳೇಗಾರರಿದ್ದರು. ಆ ಸಂದರ್ಭದಲ್ಲಿ ಅವರಿಗೆ 7 ರಂಜಣಿಗಿ ಬಂಗಾರ ಸಿಕ್ಕಿತ್ತು.
ಅದನ್ನು ಅವರು ಮನೆಗೆ ತೆಗೆದುಕೊಂಡು ಹೋಗಲಿಲ್ಲ. ಅಲ್ಲಿನ ರಾಜರಿಗೆ ಕೊಟ್ಟು ಸಮಸ್ತ ಜನಗಳ ಕಲ್ಯಾಣಕ್ಕೆ ಬಳಸಲು ತಿಳಿಸಿದ್ದರು. ಅದಕ್ಕೂ ಮೊದಲು ತಿಮ್ಮಪ್ಪ ನಾಯಕ ಎಂಬ ಹೆಸರಿನಿಂದ ಪ್ರಸಿದ್ದರಾಗಿದ್ದ ಅವರು ಅಂದಿನಿಂದ ಕನಕ ಎಂಬ ಹೆಸರಿನಿಂದ ಗುರುತಿಸಲ್ಪಟ್ಟರು ಎಂದರು. ಎಲ್ಲಿ ಭಕ್ತಿ ಇದೆ, ಅಲ್ಲೇ ದೇವರು ಇದ್ದಾನೆ ಎಂದು ಕನಕದಾಸರು ತಿಳಿಸಿದ್ದಾರೆ. ಬೊಮಗೊಂಡೇಶ್ವರರವರು ಕೂಡ ತಮಗಾಗಿ ಅಲ್ಲದೇ ಮುಂದಿನ ಪೀಳಿಗೆಯ ಸಲುವಾಗಿ ಕೆಲಸ ಮಾಡಿದ್ದಾರೆ. ಬುದ್ಧ, ಬಸವ, ಕನಕ, ಅಂಬೇಡ್ಕರ್, ವಾಲ್ಮೀಕಿ ಸೇರಿದಂತೆ ಅನೇಕ ಮಹಾತ್ಮಾರ ಮೂರ್ತಿಗಳನ್ನು ನಾವು ಪ್ರತಿಷ್ಠಾಪನೆ ಮಾಡುತ್ತೇವೆ.
Merry Christmas 2024: ಕ್ರಿಸ್ಮಸ್ ಹಬ್ಬದ ಇತಿಹಾಸ ತಿಳಿದಿದೆಯಾ..? ಯೇಸು ಕ್ರಿಸ್ತನ ಜನನದ ಬಗ್ಗೆ ಇಲ್ಲಿದೆ ಮಾಹಿತಿ
ಆ ಮಹಾತ್ಮರು ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಮಹಾತ್ಮರನ್ನು ನಾವು ಬರೇ ಮೂರ್ತಿ ಪ್ರತಿಷ್ಠಾಪನೆಗೆ ಸೀಮಿತಗೊಳಿಸಬಾರದು. ಅವರ ತತ್ವ ಸಿದ್ದಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.ಎಸ್ಟಿ ಸಮುದಾಯ ಭವನವನ್ನು ಪ್ರತಿ ಗ್ರಾಮಕ್ಕೆ ನೀಡುವ ಕೆಲಸವನ್ನು ನಾನು ಮಾಡುತ್ತಾ ಬಂದಿದ್ದೇನೆ. ಎಸ್ಟಿ ಸಮುದಾಯ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಕನಕ ಗುರು ಪೀಠ ತಿಂಥಿಣಿ ಬ್ರಿಡ್ಜ್ ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಪುರಿ ಮಹಾ ಸ್ವಾಮೀಜಿಯವರು, ತ್ಯಾಗಿಗಳಾದವರನ್ನು ಭೂಮಿ ತಾಯಿ ಹೊತ್ತು ಮೆರೆಯುತ್ತಾಳೆ. ಭೋಗಿಗಳನ್ನು, ಸ್ವಾರ್ಥಿಗಳನ್ನು ಭೂಮಿಯಲ್ಲಿ ಮಣ್ಣಲ್ಲಿ ಮಣ್ಣಾಗಿಸಿದ್ದಾಳೆ. ಹೆಸರು ಇಲ್ಲದಂಗೆ ಮಾಡಿದ್ದಾಳೆ ಎಂದರು.
ಜಗತ್ತಿಗಾಗಿ, ದೈವತ್ವಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾತ್ಮರನ್ನು ಭೂಮಿ ತಾಯಿ ಹೊತ್ತು ಮೆರೆಸುತ್ತಾಳೆ. ಅದಕ್ಕೆ ಕನಕದಾಸ, ಬಸವಣ್ಣ, ವಾಲ್ಮೀಕಿ ಸೇರಿದಂತೆ ಅನೇಕ ಮಹಾತ್ಮರು ಉದಾಹರಣೆಯಾಗಿದ್ದಾರೆ ಎನ್ನಬಹುದಾಗಿದೆ. ತಮ್ಮನ್ನು ತಾವು ದೇವರಿಗೆ ಅರ್ಪಿಸಿಕೊಂಡವರಿಗೆ ಭಗವಂತ ನೆಮ್ಮದಿ ಕೊಡುತ್ತಾನೆ. ಆನಂದಕ್ಕಾಗಿ, ಮುಕ್ತಿಗಾಗಿ ಕಾಗಿನೆಲೆ ಆದಿಕೇಶವನ ಧ್ಯಾನ ಮಾಡಬೇಕು ಎಂದು ಕನಕದಾಸರು ಹೇಳಿದ್ದಾರೆ. ಅಂತಹ ಮಹಾತ್ಮರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಪುರಿ ಮಹಾ ಸ್ವಾಮೀಜಿಯವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಪುರಿ ಮಹಾ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಚಿಕ್ಕಲಿಂಗ ಬೀರದೇವರು, ಬಾಲ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗೋಪಾಲ ಮುತ್ಯಾರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆ, ಪ್ರಮುಖರಾದ ಎಮ್.ಎಸ್ ಕಟಗಿ, ಅಮೃತರಾವ್ ಚಿಮಕೋಡೆ, ಡಾ. ಸಂಜೀವಕುಮಾರ್ ಅತಿವಾಳೆ, ಭಾರತಿಬಾಯಿ ಮಲ್ಲಿನಾಥ ಶೇರಿಕಾರ್,
ಗೀತಾ ಪಂಡೀತರಾವ್ ಚಿದ್ರಿ, ಪೀರಪ್ಪಾ ಔರಾದೆ, ಮುರಳೀಧರರಾವ್ ಎಕಲಾರಕರ್, ಬಸವರಾಜ ಮಾಳಗೆ, ಮಾಳಪ್ಪ ಅಡಸಾರೆ, ವಿಜಯಕುಮಾರ್ ಡುಮ್ಮೆ, ಪ್ರಭುರಾವ್ ಕೊಳೆಕರ್, ಶಿವರಾಜ್ ಬಿರಾದಾರ, ಕುಶಲರಾವ್ ಯರನಳ್ಳಿ, ಸಂತೋಷ್ ಜೋಳದಾಪಕೆ, ಗುರುನಾಥ್ ರಾಜಗೀರಿ, ತುಕಾರಾಮ್ ಚಿಮಕೋಡೆ, ಬಸವರಾಜ್ ಹೆಡೆ, ಪಿ.ಎಸ್ ಇಟಗಂಪಳ್ಳಿ, ರವೀಂದ್ರ ಕಣಜಿ, ಲೋಕೇಶ್ ಮೇತ್ರೆ, ಪ್ರದೀಪ್ ಬೇಂದ್ರೆ, ಮಿಟ್ಟುಸಿಂಗ್, ರಾಜಕುಮಾರ್ ಬಗದಲಕರ್, ರಮೇಶ್ ಮಂಟಾಳ್ ಸೇರಿದಂತೆ ಅನೇಕರಿದ್ದರು. ಸ್ವಾಗತ ಗೀತೆಯನ್ನು ಶಿವಾನಂದ ಪಂಚಾಳ ಹಾಡಿದರೆ, ಸಂತೋಷ ವಗ್ಗೆ ಸ್ವಾಗತಿಸಿದರು. ಶಿವರಾಜ ಕಟಗಿರವರು ನಿರೂಪಿಸಿದರೆ, ಧನರಾಜ ಕಟಗಿರವರು ವಂದಿಸಿದರು.