ಬಾಗಲಕೋಟೆ : ಮೊಬೈಲ್ ಮೂಲಕ ನಕಲಿ ಕರೆಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ, ಅದೇ ಸಂದೇಶಗಳ ಮೂಲಕವೇ ಮತ್ತೇ ಖೆಡ್ಡಾಗೆ ಬೀಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಮತ್ತೊಂದು ಪ್ರಕರಣ ಸಾಕ್ಷಿಯಾಗಿ, ಡೆಬಿಟ್/ಕ್ರೆಡಿಟ್ನಿಂದ ಯುಪಿಐ ಮೂಲಕ ಸಹಾಯವಾಣಿ ಹೆಸರಲ್ಲಿ ಇಲ್ಲಿನ ತಾಪಂ ಅಧಿಕಾರಿಯೊಬ್ಬರಿಗೆ ಆನಲೈನ್ನಲ್ಲಿ 2.5 ಲಕ್ಷ ರೂ.ಗಳಷ್ಟು ವಂಚಿಸಲಾಗಿದೆ.
ಆಗಿದ್ದೇನು?: ದಿ.26 ರಂದು `ಎಸ್ಬಿಐ ಕಾರ್ಡ್’ ಚಿಹ್ನೆಯೊಂದಿಗೆ ಹಿಂದಿ ಭಾಷೆಯಲ್ಲಿ ಕರೆ ಮಾಡಿದ್ದಾರೆ. ನಿಮ್ಮ ಎಸ್ಬಿಐನ ಡೆಬಿಟ್/ಕ್ರೆಡಿಟ್ ಕಾರ್ಡ್ನ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಕಾರ್ಡ್ ನಂಬರ್ ದೃಢೀಕರಿಸಿಕೊಳ್ಳಲು ನಂಬರ್ ತಿಳಿಸಿ ಎಂದಿದ್ದಾರೆ. ಕರೆಯನ್ನು ನಿರ್ಲಕ್ಷ್ಯ ಮಾಡಿದ ನೌಕರನಿಗೆ ಮತ್ತೇ ಮರುದಿನ ಕರೆ ಮಾಡಿ ನಂಬರ್ ತಿಳಿಸುವಂತೆ ವಶೀಕರಣದ ಮಾತುಗಳನ್ನಾಡಿದ್ದಾರೆ. ನಾನು ಸ್ಥಳೀಯ ಶಾಖೆಗೆ ಭೆಟ್ಟಿ ಕೊಡುವದಾಗಿ ತಿಳಿಸಿದ ನೌಕರಿನಿಗೆ ಬ್ಯಾಂಕ್ಗಳಿಗೆ ಎರಡು ದಿನ ರಜೆ ಕಾರಣ ಇಲ್ಲಿಂದಲೇ ತಮ್ಮ ಕ್ರೆಡಿಟ್ ಕಾರ್ಡ್ನ 50 ಸಾವಿರ ಬದಲಾಗಿ 1 ಲಕ್ಷ ರೂ.ಗಳವರೆಗೆ ಹೆಚ್ಚಿಸಲಾಗುವದೆಂದು ತಿಳಿಸಿದ್ದನ್ನು ನಂಬಿದ ನೌಕರ ಕಾರ್ಡ್ ಮೇಲಿನ ಸಂಖ್ಯೆಗಳನ್ನು ಹೇಳಿದ್ದಾರೆ. ಆ ಕಡೆಯಿಂದ ತಮ್ಮ ನಂಬರ್ಗಳು ಸರಿಯಾಗಿವೆ ಧನ್ಯವಾದವೆಂದು ತಿಳಿಸಿದ್ದಾರೆ.
ಅದರಂತೆ ಮತ್ತೊಮ್ಮೆ ಅವಧಿ ಮುಕ್ತಾಯದ ದಿನಾಂಕ ಸ್ಪಷ್ಟಪಡಿಸಿ ಎಂದಿದ್ದಾರೆ. ಮತ್ತೇ ವಿಶ್ವಾಸದ ಮಾತುಗಳು ಹಿಂದಿ ಭಾಷೆಯಲ್ಲಿಯೇ ಮುಂದುವರೆದು ಸಿವಿವಿ ನಂಬರ್ನ್ನು ಸ್ಪಷ್ಟಪಡಿಸಿ ಎಂದಿದ್ದಷ್ಟೇ ತಡ ಉತ್ತರಿಸಿದ ನಂತರ 19 ಸಾವಿರ ಚಿಲ್ಲರೆ ಹಣ ಬಟವಡೆಯಾಗುತ್ತಲೇ ಖಾತೆಯಲ್ಲಿರುವ ಎಲ್ಲ ಹಣ ಖಾಲಿ ಮಾಡಿದ್ದಾರೆ.
ಮೂರು ದಿನಗಳಿಂದ ಹಣ ಬಟವಡೆ: ದಿ.27 ರಿಂದ 30 ನೇ ತಾರೀಖಿನವರೆಗೂ 19 ಸಾವಿರ ಮೇಲ್ಪಟ್ಟ ಹಣವನ್ನು ಸುಮಾರು 10 ಬಾರಿ ಬಟವಡೆ ಮಾಡಿಕೊಂಡಿದ್ದಾರೆ. ಈ ಕುರಿತು ಗ್ರಾಹಕನಿಗೆ ತಿಳಿಯಬಾರದೆಂಬ ಉದ್ದೇಶಕ್ಕೆ ಡಿಎನ್ಡಿ(ಡು ನೋಟ್ ಡಿಸ್ಟರ್ಬ್) ಅಂದರೆ ಮೊಬೈಲ್ಗಳಿಗೆ ಖಾತೆಯ ಮಾಹಿತಿ ಬಾರದಂತೆ ಪ್ಲಾನ್ ಹೂಡಿದ್ದಾರೆ. ಸಂಶಯಗೊAಡ ಸಂತ್ರಸ್ತ ಇಂದು ಸೋಮವಾರ ಸ್ಥಳೀಯ ಎಸ್ಬಿಐನಲ್ಲಿ ತೆರಳಿ ಖಾತೆಯ ಲಿಖಿತ ಹೇಳಿಕೆ ಪಡೆದ ನಂತರ ಶಾಕ್ ಆಗಿದ್ದಾರೆ. ಇತ್ತ ಮೊಬೈಲ್ ಮೂಲಕ ಪಡೆದ ನಕಲಿ ಸಹಾಯವಾಣಿ ನಂಬರ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ.
ತಕ್ಷಣ ಮೋಸ ಹೋಗಿರುವ ಬಗ್ಗೆ ಖಚಿತವಾಗಿ ಸಿಸಿಪಿ (ಸೈಬರ್ ಕೈಂ ಪೋರ್ಟಲ್) ಆನ್ಲೈನ್ ಮೂಲಕ ದೂರು ನೀಡಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ