ಕಳೆದ ಸಾಲಿನ ಮುಂಗಾರಿಗೆ ಹೋಲಿಸಿದರೆ, ಶೇ.86.65 ರಷ್ಟು ಇದ್ದ ರಾಗಿ ಇಳುವರಿ ಪ್ರಮಾಣ ಈ ಬಾರಿ ಅರ್ಧದಷ್ಟು ದಾಟಿದೆ ಶೇ.49 ರಷ್ಟು ಮಾತ್ರ ರಾಗಿಯ ಇಳುವರಿಯಾಗಿದೆ.
ರಾಗಿಯು ಜಿಲ್ಲೆಯ ಮುಖ್ಯ ಬೆಳೆಗಳಲ್ಲಿ ಒಂದಾಗಿದೆ. ಕಳೆದ ವರ್ಷ 2022ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಮಳೆಯಾಗಿತ್ತು. ಈ ಪರಿಣಾಮವಾಗಿ ಸಕಾಲದಲ್ಲಿಯೇ ಬಿತ್ತನೆಯಾಗಿತ್ತು. ಜಿಲ್ಲೆಯಲ್ಲಿ ಎಂಆರ್1, ಎಂಆರ್5, ಎಂಆರ್6, ಜಿಪಿಯು 28, ಜಿಪಿಯು 46 ರಾಗಿ ತಳಿಯನ್ನೇ ಬಿತ್ತನೆ ಮಾಡಲಾಗುತ್ತಿದೆ. ಜತೆಗೆ ರೈತರು ಸಹ ಕಳೆದ ಮುಂಗಾರಿನಲ್ಲಿ ಕೃಷಿ ಚಟುವಟಿಕೆ ನಡೆಸಿದ್ದರು. ಹಾಗಾಗಿ ಕಳೆದ ಹಂಗಾಮಿನಲ್ಲಿ ರಾಗಿ ಸಮೃದ್ಧವಾಗಿ ಬೆಳೆದಿತ್ತು. ಈ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿಇಳುವರಿ ಕಂಡಿತ್ತು.
ಪ್ರತಿ ವರ್ಷದಂತೆ ಈ ಬಾರಿಯು 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಬೇಕಿತ್ತು. ಅದರೆ, ಸಕಾಲದಲ್ಲಿ ಮಳೆಯಾಗದ ಕಾರಣ ಈ ಬಾರಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಮಳೆ ಕೊರತೆ ಪರಿಣಾಮ ಬಿತ್ತನೆ ಕಾರ್ಯವೂ ಮುಂದೂಡುವ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಜಿಲ್ಲೆಯ ಕೆಲವು ಕಡೆ ರಾಗಿಯನ್ನು ಬಿತ್ತನೆ ಮಾಡಲಾಗಿದೆ.
ತೀವ್ರ ಬರಪೀಡಿತ ಪ್ರದೇಶಗಳಲ್ಲಿ 42897 ಹೆಕ್ಟೇರ್ ಪ್ರದೇಶವೂ ಬೆಳೆ ಹಾನಿ ಸಂಭವಿಸಿ ಶೇ.35ಕ್ಕಿಂತ ಹೆಚ್ಚು ಬೆಳೆ ನಷ್ಟ ಉಂಟಾಗಿದೆ. ಹಾಗಾಗಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಅಂದಾಜು 3573.4ಲಕ್ಷ ಬರ ಪರಿಹಾರ ನೀಡಲು ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಿತ್ತು.
ಮಳೆಯ ತೀವ್ರ ಕೊರತೆಯಿಂದಾಗಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 92655 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಸೇರಿದಂತೆ ವಿವಿಧ ಬೆಳೆ ಬಿತ್ತನೆಯಾಗಬೇಕಿತ್ತು. ಆದರೆ, ಮುಂಗಾರು ಅಂತ್ಯಕ್ಕೆ ಕೇವಲ 46358 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.