ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ (Ram Lalla) ಪ್ರಾಣಪ್ರತಿಷ್ಠೆ ಹಿನ್ನೆಲೆ ರಾಜ್ಯದಲ್ಲಿ ಸೋಮವಾರ ರಜೆ ಘೋಷಣೆ ಮಾಡಿ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಕಾಂಗ್ರೆಸ್ (Congress) ಸರ್ಕಾರ ರಾಮಮಂದಿರದ (Ram Mandir) ಉದ್ಘಾಟನಾ ಕಾರ್ಯಕ್ರಮದಲ್ಲೂ ರಾಜಕೀಯ ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ರಜೆ ಘೋಷಣೆ ಮಾಡಿಲ್ಲ. ಅಂದು ರಾಜ್ಯದ ಕೋಟ್ಯಂತರ ಜನ ರಾಮ ಪ್ರತಿಷ್ಠಾಪನೆಯನ್ನು ನೋಡಲು ಕಾಯುತ್ತಿದ್ದಾರೆ. ಆದ್ರೆ ರಾಜ್ಯಸರ್ಕಾರ ಅಂದು ರಜೆ ನೀಡದೇ ಮೌನವಹಿಸಿದೆ ಎಂದು ಕಿಡಿಕಾರಿದ್ದಾರೆ
ಈಗಾಗಲೇ ದೇಶದಲ್ಲಿ ಬಿಜೆಪಿ (BJP) ಸರ್ಕಾರ ಇರುವ ರಾಜ್ಯಗಳು ರಜೆ ಘೋಷಣೆ ಮಾಡುತ್ತಿವೆ. ಇಡೀ ದೇಶ ಸೋಮವಾರ ರಾಮ ಲಲ್ಲಾ ಪ್ರತಿಷ್ಠಾಪನೆಗೆ ಕಾತರದಿಂದ ಕಾಯುತ್ತಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ರಜೆ ಘೋಷಣೆ ಮಾಡಬೇಕು. ಸಾವಿರಾರು ಸಂಘಟನೆಗಳು ಸಿಎಂಗೆ ಮನವಿ ಮಾಡಿವೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸಹ ಮನವಿ ಮಾಡಿದ್ದಾರೆ. ಸಿಎಂ ಮಾತ್ರ ಯಾವುದೇ ನಿಲುವು ತೆಗದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.