ರೆಬೆಲೆ ಸ್ಟಾರ್ ಅಂಬರೀಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಪೋಷಕರಾಗಿದ್ದು ಅವಿವಾ ಅವರು ಗಂಡುಮಗುವಿಗೆ ಜನ್ಮನೀಡಿದ್ದಾರೆ. ಇಂದು (ನವೆಂಬರ್ 12) ಮಗು ಜನಿಸಿದ್ದು, ಮಗುವಿನ ಜೊತೆ ಸುಮಲತಾ ಅಂಬರೀಷ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಅಭಿಷೇಕ್ ಹಾಗೂ ಅವಿವಾ ಅವರು 2023ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯಾದ ಒಂದು ವರ್ಷದಲ್ಲೇ ಮನೆಗೆ ಮುದ್ದು ಕಂದನ ಆಗಮನವಾಗಿದೆ. ಇಂದು ಬೆಳಿಗ್ಗೆ 8.30 ಸುಮಾರಿಗೆ ಅವಿವಾ ಮಗುವಿಗೆ ಜನ್ಮ ನೀಡಿದ್ದಾರೆ.
ಅವಿವಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಯಿತು. ಅದ್ದೂರಿಯಾಗಿ ಅವರ ಸೀಮಂತಶಾಸ್ತ್ರ ಕೂಡ ನೆರವೇರಿತ್ತು. ಈಗ ಅವರು ಗಂಡು ಮಗುವಿನ ತಾಯಿ ಆಗಿದ್ದಾರೆ. ‘ಅಂಬಿ ಮತ್ತೆ ಹುಟ್ಟಿ ಬಂದ’ ಎಂದು ಅಂಬರೀಷ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಅವಿವಾ ಅವರ ಸೀಮಂತ ಕಾರ್ಯಕ್ರಮ ನೆರವೇರಿತ್ತು. ಸೀಮಂತ ಕಾರ್ಯಕ್ರಮದಲ್ಲಿ ಚಿತ್ರರಂಗದ ಕೆಲವು ಗಣ್ಯರು ಆಗಮಿಸಿದ್ದರು. ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಬಂದು ಅವಿವಾ ಅವರನ್ನು ಹರಸಿದ್ದರು. ಅವಿವಾ ಬಿದಪ್ಪ ಅವರು, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದಪ್ಪ ಮಾಡೆಲಿಂಗ್ನಲ್ಲಿಯೂ ಆಸಕ್ತಿ ಹೊಂದಿದ್ದಾರೆ.