ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಆಝಮ್ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ವೈಟ್ಬಾಲ್ ತಂಡದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ಬಲಗೈ ಬ್ಯಾಟ್ಸ್ಮನ್ ಘೋಷಿಸಿದ್ದಾರೆ. ಬಾಬರ್ ಆಝಮ್ ನಾಯಕನ ಕರ್ತವ್ಯಕ್ಕೆ ವಿದಾಯ ಹೇಳುತ್ತಿರುವುದು ಇದು ಎರಡನೇ ಬಾರಿ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಮುಕ್ತಾಯದ ನಂತರ, ಅವರು ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ಹೊತ್ತು ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದ್ದರು
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಾಬರ್ ಆಝಮ್ ಅವರನ್ನು ಮತ್ತೆ ವೈಟ್ ಬಾಲ್ ತಂಡಗಳ ನಾಯಕನ್ನಾಗಿ ನೇಮಿಸಿತ್ತು. ಆದರೆ ಈ ಟೂರ್ನಿಯಲ್ಲಿಯೂ ಪಾಕಿಸ್ತಾನ ತಂಡ ಅತ್ಯಂತ ಹೀನಾಯ ಪ್ರದರ್ಶನವನ್ನು ತೋರಿತ್ತು. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ಬಾಬರ್ ಆಝಮ್ ಪಡೆ ಮೊದಲ ಸುತ್ತಿನಿಂದಲೇ ನಿರ್ಗಮಿಸಿತ್ತು.
ಒಗ್ಗಟ್ಟಿನ ಕೊರತೆಯಿಂದ ಬಾಬರ್ ಆಝಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಸ್ವತಃ ಬಾಬರ್ ಆಝಮ್ ಅವರು ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಲು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಟ್ವಿಟರ್ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಆತ್ಮೀಯ ಅಭಿಮಾನಿಗಳೇ, ನಾನು ಇಂದು ನಿಮ್ಮೊಂದಿಗೆ ಒಂದು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ನಿರ್ಧಾರವನ್ನು ಕಳೆದ ತಿಂಗಳು ಪಾಕಿಸ್ತಾನ ಮಂಡಳಿ ಮತ್ತು ತಂಡದ ಆಡಳಿತ ಮಂಡಳಿಗೆ ತಿಳಿಸಲಾಗಿತ್ತು.