ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ದೀರ್ಘ ಕಾಲ ಆಡಿ ಎಚ್ಚು ಹೆಚ್ಚು ರನ್ ಗಳಿಸುವ ಬಯಕೆ ಇದ್ದರೆ ವಿವಾದಗಳಿಂದ ಬಾಬರ್ ಆಝಮ್ ದೂರ ಉಳಿಯಬೇಕಾಗುತ್ತದೆ ಎಂದು ಪಾಕಿಸ್ತಾನ ತಂಡ ಮಾಜಿ ನಾಯಕ ಯೂನಿಸ್ ಖಾನ್ ಹೇಳಿದ್ದಾರೆ.
“ಪಾಕಿಸ್ತಾನ ತಂಡದ ಪರ ಎಲ್ಲಾ ಮಾದರಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬಾಬರ್ ಆಝಮ್ಗೆ ಕ್ಯಾಪ್ಟನ್ಸಿ ಸಿಕ್ಕಿತ್ತು. ಈಗ ಮತ್ತಷ್ಟು ಉತ್ತಮ ಕ್ರಿಕೆಟರ್ ಆಗಿ ಬೆಳೆಯಲು ಅವರು ವಿವಾದಗಳಿಂದ ದೂರ ಉಳಿಯಬೇಕು. ಅವರ ಗಮನ ಕೇವಲ ಆಟದ ಕಡೆಗಷ್ಟೇ ಇರಬೇಕು. ಪಾಕ್ ತಂಡವನ್ನು ಮುನ್ನಡೆಸುವುದಕ್ಕಿಂತಲೂ ದೊಡ್ಡ ಸಂಗತಿಗಳಿವೆ. ತಮಗೆ ಯಾವುದು ಮುಖ್ಯ ಎಂಬುದನ್ನು ಬಾಬರ್ ಮೊದಲು ನಿರ್ಧರಿಸಬೇಕು. ನಾನು ನನ್ನ ವೃತ್ತಿಬದುಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಒಡಿಐ ರನ್ ಗಳಿಸಿದೆ. ನನ್ನ ಪ್ರಕಾರ ಬಾಬರ್ಗೆ 15 ಸಾವಿರಕ್ಕೂ ಹೆಚ್ಚು ರನ್ ಗಳಿಸುವ ಸಾಮರ್ಥ್ಯವಿದೆ,” ಎಂದು ಯೂನಿಸ್ ಖಾನ್ ಹೇಳಿದ್ದಾರೆ.
“ಬಾಬರ್ ಆಝಮ್ ಟೀಮ್ ಇಂಡಿಯಾ ತಾರೆ ವಿರಾಟ್ ಕೊಹ್ಲಿ ಅವರನ್ನು ನೋಡಿ ಕಲಿಯಬೇಕು. ಕ್ಯಾಪ್ಟನ್ಸಿ ಬಿಟ್ಟ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾಯಕತ್ವ ಬಿಟ್ಟ ಬಳಿಕ ಅವರು ಬ್ಯಾಟಿಂಗ್ ಕಡೆಗೆ ಗಮನ ನೀಡಿದ ಮಾದರಿಯಲ್ಲೇ ಬಾಬರ್ ಆಝಮ್ ಕೂಡ ಗಮನ ನೀಡಬೇಕು,” ಎಂದು ಯೂನಿಸ್ ವಿವರಿಸಿದ್ದಾರೆ.