ಕ್ಯಾನ್ಬೆರಾ: 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 79 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜೊತೆಗೆ 4ನೇ ಬಾರಿಗೆ ಅಂಡರ್ 19 ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿದೆ.
1988ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ, 2002 & 2010ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ನಂತರ 2012 ಮತ್ತು 2018ರಲ್ಲಿ ಫೈನಲ್ ತಲುಪಿದ್ದರೂ ಭಾರತದ ವಿರುದ್ಧವೇ ಸೋತು ರನ್ನರ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.