ಎಣ್ಣೆ ಪ್ರಿಯರ ಕಿಕ್ ಇಳಿಸುವ ಸುದ್ದಿ ಇದು. ಮದ್ಯ ಪ್ರಿಯರು ಎಣ್ಣೆಗಾಗಿ ಪ್ರಾಣ ಬಿಡುವ ಮಟ್ಟಕ್ಕೂ ಇಳಿಯುತ್ತಾರೆ. ಎಣ್ಣೆಯ ಚಮತ್ಕಾರವೇ ಅಂತದ್ದೇನೋ ಗೊತ್ತಿಲ್ಲ. ಅದರಲ್ಲೂ ಇತ್ತೀಚಿನ ಯುವ ಪೀಳಿಗೆ ಚಿಕ್ಕ ವಯಸ್ಸಿನಿಂದಲೇ ಮದ್ಯ ವ್ಯಸನಿಗಳಾಗಿ ಬಿಡುತ್ತಾರೆ.
ಒಂದು ಸಲ ಎಣ್ಣೆ ಕರಾಮತ್ತು ತಲೆಗೆ ಏರಿದರೆ, ಅಬ್ಬಾ ಕುಡುಕರಿಗೆ ಸ್ವರ್ಗವೇ ಇಳಿದಂತೆ. ಮದ್ಯ ಪ್ರಿಯರಿಗೆ ಎಣ್ಣೆ ಅಂದ್ರೆ ಒಂಥರಾ ಕಿಕ್. ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಸಮಾರಂಭಗಳಿರಲಿ, ಪಾರ್ಟಿಗಳಿರಲಿ ಇಂದು ಮದ್ಯ ಇಲ್ಲದೇ ನಡೆಯೋದೆ ಇಲ್ಲವೆಂಬಂತಾಗಿದೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕ ಸ್ಥಳಗಳಲ್ಲೂ, ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಅಥವಾ ನಗರಗಳಲ್ಲೂ ಮದ್ಯಪಾನ ಮಾಡಲು ಶುರುಮಾಡಿದ್ದಾರೆ. ಇದು ನಂತರ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುತ್ತದೆ. ಕುಡಿದ ಮತ್ತಿನಲ್ಲಿ ಜಗಳ, ಅಸಾಮಾಜಿಕ ಚಟುವಟಿಕೆಗಳು, ಜನಜೀವನ ಅಸ್ತವ್ಯಸ್ತಗೊಳಿಸುವಂಥ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಇತ್ತೀಚೆಗೆ ಇದು ಮಿತಿ ಮೀರಿ ನಡೆಯುತ್ತಿದ್ದು, ಮದ್ಯ ಸೇವಿಸುವುದನ್ನು ಇನ್ಮುಂದೆ ತಡೆಯಲಾಗುವುದಿಲ್ಲ ಎಂದು ಅನಂತಪುರ ಜಿಲ್ಲಾ ಎಸ್ಪಿ ಜಗದೀಶ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಪರಾಧವಾಗಿದ್ದು, ಜನಜೀವನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಸಾರ್ವಜನಿಕ ಶಾಂತಿ ಕದಡುವವರ ವಿರುದ್ಧ ವಿಶೇಷ ಅಭಿಯಾನವನ್ನೂ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿದ್ದಕ್ಕಾಗಿ 85 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮದ್ಯ ಸೇವಿಸಿ ವಾಹನ ಚಲಾಯಿಸಿದ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆ ಸುರಕ್ಷತೆ ಉಲ್ಲಂಘನೆಗಾಗಿ 584 ಪ್ರಕರಣಗಳನ್ನು ದಾಖಲಿಸಿ ₹1,29,650 ದಂಡ ವಿಧಿಸಲಾಗಿದೆ
ಅಲ್ಲದೆ ಆರ್ಟಿಸಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 98 ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಪರಿಶೀಲಿಸಲಾಗಿದೆ. ಅವರಲ್ಲಿ ನಾಲ್ವರನ್ನು ಠಾಣೆಗೆ ಕರೆದೊಯ್ದು ವಿಚಾರಣೆಯನ್ನೂ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಎಟಿಎಂಗಳಲ್ಲೂ ಹಲವು ತೊಂದರೆಗಳಾಗುತ್ತಿದ್ದು, ಇದಕ್ಕೂ ಕ್ರಮ ಕೈಗೊಳ್ಳಲಾಗಿದೆ.
ಹೀಗೆ ರಸ್ತೆ, ಫುಟ್ಪಾತ್, ಉದ್ಯಾನವನ, ವ್ಯಾಪಾರ ಸ್ಥಳ ಅಥವಾ ಉಪನಗರಗಳಲ್ಲಿ ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ
ಜನರ ಶಾಂತಿ ಮತ್ತು ಭದ್ರತೆಗೆ ಭಂಗ ತರುವ ಯಾವುದೇ ಕೆಲಸ ಮಾಡಿದ್ರೂ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಮದ್ಯ ವ್ಯಸನದಿಂದ ವ್ಯಕ್ತಿ ಜೀವನಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಹಾನಿಕಾರಕವಾಗಿದ್ದು, ಇದರ ವಿರುದ್ಧ ಕಠಿಣ ನಿಯಮಾವಳಿಗಳ ಅಗತ್ಯವಿದೆ ಎಂದು ಎಸ್ಪಿ ಈ ವೇಳೆ ಎಚ್ಚರಿಸಿದರು. ಕೆಲರಾಜ್ಯಗಳಲ್ಲಿ ಈ ಬಗ್ಗೆ ಈಗಾಗಲೇ ಕ್ರಮಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಬರುವ ಸಾಧ್ಯತೆ ಇದೆ.