ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ ವಹಿವಾಟು ವಿಧಾನವನ್ನು ಪರಿಚಯಿಸಿದೆ. ಇದು ಇಂದು ಅತ್ಯಂತ ಜನಪ್ರಿಯ ವ್ಯಾಪಾರ ವಿಧಾನಗಳಲ್ಲಿ ಒಂದಾಗಿದೆ. UPI ಮೂಲಕ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿ ಮಾಡಬಹುದು. ನಿಮಿಷಗಳಲ್ಲಿ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಇಂಟರ್ ನೆಟ್ ಸಂಪರ್ಕವಿರುವ ಪ್ರತಿಯೊಂದು ಸ್ಮಾರ್ಟ್ ಫೋನ್ ಮೂಲಕವೂ ಯುಪಿಐ ಬಳಸಿ ಹಣಕಾಸು ವಹಿವಾಟು ನಡೆಸಬಹುದು ಎಂಬುದು ಗೊತ್ತಿರುವ ವಿಚಾರ.
ಆದರೆ ಇದನ್ನೇ ಕೆಲ ಕಿಡಿಗೇಡಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಅಣ್ಣಾ, ಬೈ ಮಿಸ್ಟೇಕ್ ಆಗಿ ನಿಮಗೆ 1,500 ರೂಪಾಯಿ ಪಾವತಿ ಮಾಡಿದ್ದೇನೆ. ಆಪ್ತರ ಆಸ್ಪತ್ರೆಯ ಮೆಡಿಕಲ್ ಬಿಲ್ ಪಾವತಿ ಮಾಡುವಾಗ ಆದ ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಹೋಗಿದೆ. ದಯವಿಟ್ಟು 1,500 ರೂಪಾಯಿ ಮರಳಿಸಿ. ನನ್ನ ನಂಬರ್, ಅಥವಾ ಕ್ಯೂಆರ್ ಕೋಡ್ ಅಥವಾ ಖಾತೆಗೆ, ನಿಮಗೆ ಯಾವುದು ಸುಲಭವೋ ಅದಕ್ಕೆ ಮರುಪಾವತಿಸಿ ಎಂದು ದಯನೀವಾಗಿ ಕರೆ, ಮೆಸೇಜ್ಗಳು ಬರುತ್ತಿದ್ದರೆ, ನಿಮಗೆ ಅನಾಮಿಕ ವ್ಯಕ್ತಿಗಳ ಖಾತೆಯಿಂದ ಈ ರೀತಿ ಸಣ್ಣ ಮೊತ್ತ ಬಂದರೆ ಎಚ್ಚರ.
ಅಪ್ಪಿ ತಪ್ಪಿ ಈ ಹಣವನ್ನು ಅವರು ಹೇಳುವಂತೆ ಮರಳಿಸಬೇಡಿ. ಇದು ಅತೀ ದೊಡ್ಡ ವಂಚನೆ ಜಾಲ. ಹೊಸ ಸೈಬರ್ ಕ್ರೈಂ ಇದೀಗ ಹಲೆವೆಡೆ ವರದಿಯಾಗುತ್ತಿದೆ.
ಯುಪಿಐ ವಹಿವಾಟಿನಲ್ಲಿ ಹಲವು ವಂಚನೆಗಳು ನಡೆಯುತ್ತಿದೆ. ಇದೀಗ ಹೊಸ ವಂಚನೆ ಜಾಲವೊಂದು ಪತ್ತೆಯಾಗಿದೆ. ನಿಮ್ಮ ಖಾತೆಗೆ ಅನಾಮಿಕರು 1,000 ರೂಪಾಯಿ, 1,500 ರೂಪಾಯಿ ಸೇರಿದಂತೆ ಸಣ್ಣ ಮೊತ್ತವನ್ನು ವರ್ಗಾವಣೆ ಮಾಡುತ್ತಾರೆ. ಬಳಿಕ ತಪ್ಪಾಗಿ ನಿಮಗೆ ವರ್ಗಾವಣೆ ಮಾಡಿದ್ದೇನೆ. ನೀವು ಮರಳಸಿ ಎಂದು ತಮ್ಮ ನಂಬರ್, ಕ್ಯೂಆರ್ ಕೋಡ್ ವಿವರ ನೀಡುತ್ತಾರೆ. ಕೇವಲ 1,500 ರೂಪಾಯಿ, ತಪ್ಪಾಗಿ ಬಂದಿದ್ದು ನಿಜ, ಕಾರಣ ವ್ಯಕ್ತಿ ನಿಮಗೆ ಪರಿಚಯವಿಲ್ಲ, ನೀವು ಆತನಿಂದ ಹಣ ಪಡೆದಿಲ್ಲ, ಕೇಳಿಯೂ ಇಲ್ಲ. ಹೀಗಾಗಿ ಮರಳಿಸಿದರೆ ಆಯ್ತು ಎಂಬ ನಿರ್ಧಾರ ಮಾಡಿದರೆ ನಿಮ್ಮ ಖಾತೆಗೆ ಕನ್ನ ಬಿದ್ದಂತೆ.
ವ್ಯಕ್ತಿಯೊಬ್ಬರು ಈ ಕುರಿತು ಹೊಸ ಸೈಬರ್ ಕ್ರೈಂ ಕುರಿತು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಇದೇ ವೇಳೆ ಎಲ್ಲರೂ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಹಣ ಹಿಂದಿರುಗಿಸುವ ವಿಧಾನ ಹಾಗೂ ಸುರಕ್ಷತೆ ಕುರಿತು ತಿಳಿ ಹೇಳಿದ್ದಾರೆ. ವೈದ್ಯನಾಥನ್ ಅವರಿಗೆ 1,500 ರೂಪಾಯಿ ಯುಪಿಐ ಮೂಲಕ ಯಾರೋ ವರ್ಗಾವಣೆ ಮಾಡಿದ್ದಾರೆ. ಕೆಲ ಹೊತ್ತಲ್ಲೇ ಅನಾಮಿಕರಿಂದ ಕರೆ ಬಂದಿದೆ. ತಪ್ಪಾಗಿ ನಿಮ್ಮ ಖಾತೆಗೆ 1,500 ರೂಪಾಯಿ ವರ್ಗಾವಣೆ ಮಾಡಿದ್ದೇನೆ. ನನ್ನ ವಿಶೇಷ ಚೇತನ ಮಗುವನ್ನು ಆಸ್ಪತ್ರೆ ಕೆರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಿದ್ದೇನೆ. ಈ ವೇಳೆ ಆತಂಕ, ಆತುರರದಲ್ಲಿ ಮಾಡಿದ ಪಾವತಿ ತಪ್ಪಾಗಿ ನಿಮ್ಮ ಖಾತೆಗೆ ಬಂದಿದೆ. ದಯವಿಟ್ಟು 1,500 ರೂಪಾಯಿ ಮರುಪಾವತಿ ಮಾಡಿ. ನನ್ನ ಯುಪಿಐ ನಂಬರ್,ಕ್ಯೂಆರ್ ಕೋಡ್ ಅಥವಾ ಖಾತೆಗೆ ಮರಳಿಸಿ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಯುಪಿಐ ವಿವರಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ರೀತಿಯ ವಂಚನೆ ಜಾಲದಲ್ಲಿ ಸಿಲುಕಬೇಡಿ ಎಂದು ವ್ಯಕ್ತಿ ಸಲಹೆ ಕೊಟ್ಟಿದ್ದಾರೆ.