ಮಧುಮೇಹಿಗಳು ಮಧುಮೇಹವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಅದರಲ್ಲೂ ರಾತ್ರಿ ತಿನ್ನುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ, ಯಾವ ಆಹಾರಗಳನ್ನು ರಾತ್ರಿ ವೇಳೆ ಸೇವನೆ ಮಾಡಬಾರದು ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು. ಅಂತಹ ಆಹಾರಗಳು ಇಲ್ಲಿದೆ, ನೋಡಿ…
ರಾತ್ರಿ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿದೆ ಎನ್ನುವುದಕ್ಕೆ ಹಲವಾರು ಸೂಚನೆಗಳು ಇವೆ. ಅದರಲ್ಲಿ ಮುಖ್ಯವಾಗಿ ಅತಿಯಾಗಿ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಪಾದಗಳು ಊದಿಕೊಳ್ಳುವುದು ಇತ್ಯಾದಿ. ರಾತ್ರಿ ವೇಳೆ ಕೆಲವು ಆಹಾರಗಳ ಸೇವನೆಯಿಂದಾಗಿ ಹೀಗೆ ಆಗಬಹುದು. ಅವುಗಳನ್ನು ಕಡೆಗಣಿಸಿದರೆ ಒಳ್ಳೆಯದು.
ಅಧಿಕ ಕೊಬ್ಬು ಇರುವ ಸಂಸ್ಕರಿಸಿದ ಆಹಾರ ಸೇವನೆ ಮಾಡಿದರೆ ಆಗ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುವುದು ನಿಶ್ಚಿತ. ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಉರಿಯೂತ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉಂಟು ಮಾಡಬಹುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗುವುದು
ಸಕ್ಕರೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಕೆ ಮಾಡುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ರಾತ್ರಿ ವೇಳೆ ಕೇಕ್, ಕುಕ್ಕೀಸ್ ಮತ್ತು ಐಸ್ ಕ್ರೀಮ್ ಕಡೆಗಣಿಸಬೇಕು. ಈ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಇದರಲ್ಲಿ ರಿಫೈನ್ಡ್ ಸಕ್ಕರೆ ಮತ್ತು ಕಾರ್ಬ್ಸ್ ಅಂಶವು ಅತಿಯಾಗಿದೆ. ಇದರಿಂದ ಗ್ಲುಕೋಸ್ ಮಟ್ಟ ಏರಿಕೆ ಆಗುವುದು ಮತ್ತು ರಾತ್ರಿ ವೇಳೆ ಇದು ಹಾನಿ ಉಂಟು ಮಾಡುವುದು.
ಮಧುಮೇಹಿಗಳು ರಾತ್ರಿ ವೇಳೆ ಬಿಳಿ ಬ್ರೆಡ್ ಮತ್ತು ಪಾಸ್ತಾ ಸೇವನೆ ಮಾಡಲೇ ಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗುವುದು. ಇದರಲ್ಲಿ ರಿಫೈನ್ಡ್ ಕಾರ್ಬ್ಸ್ ಇದೆ ಮತ್ತು ಗ್ಲುಕೋಸ್ ಮಟ್ಟವನ್ನು ಹಠಾತ್ ಆಗಿ ಏರಿಕೆ ಮಾಡುವುದು. ಇದರ ಬಳಿಗೆ ಕಂದು ಅಕ್ಕಿ ಅಥವಾ ಕ್ವಿನೋವಾ ಆಯ್ಕೆ ಮಾಡಿ.
ಹಾಲಿನ ಉತ್ಪನ್ನಗಳನ್ನ ರಾತ್ರಿ ವೇಳೆ ಸೇವನೆ ಮಾಡಿದರೆ, ಆಗ ಇದರಿಂದ ಗ್ಲುಕೋಸ್ ಮಟ್ಟವು ಹಠಾತ್ ಆಗಿ ಏರಿಕೆ ಆಗುವುದು. ಹಾಲಿನಲ್ಲಿ ಲ್ಯಾಕ್ಟೋಸ್ ಅಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುವುದು. ಆಯುರ್ವೇದವು ಸಸ್ಯಜನ್ಯ ಹಾಲನ್ನು ಸೇವನೆ ಮಾಡಲು ಸೂಚಿಸುತ್ತದೆ. ಬಾದಾಮಿ ಹಾಲು, ತೆಂಗಿನಕಾಯಿ ಮೊಸರು, ತೌಫು ಇತ್ಯಾದಿ ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿ ಇಡುವುದು.
ಮಸಾಲೆಯಿಂದ ಸಮೃದ್ಧವಾಗಿರುವ ಆಹಾರಗಳಾದ ಕರಿದ ಆಹಾರಗಳು, ಚಿಕನ್ ಸಾರು ಇತ್ಯಾದಿಗಳಿಂದಾಗಿ ಜೀರ್ಣಕ್ರಿಯೆ ಹಾಗೂ ಚಯಾಪಚಯವು ವೇಗ ಪಡೆದು, ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರು ಆಗಬಹುದು. ಆಯುರ್ವೇದ ಪ್ರಕಾರ ರಾತ್ರಿ ವೇಳೆ ಈ ಆಹಾರಗಳನ್ನು ಸೇವನೆ ಮಾಡಿದರೆ ಅದು ಅಡ್ಡ ಪರಿಣಾಮ ಬೀರುವುದು. ರಾತ್ರಿ ವೇಳೆ ಮಧುಮೇಹಿಗಳು ಲಘು ಆಹಾರ ಸೇವನೆ ಮಾಡಿದರೆ ಒಳ್ಳೆಯದು