ತುಮಕೂರು: ತುಮಕೂರು ನಗರದ ನಜರಾಬಾದ್ ಬಡಾವಣೆ ವಾಸಿ ಆಝಮ್ ಪಾಷಾ (37) ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಬೇಸತ್ತು ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ತುಮಕೂರಿನ ಸದಾಶಿವನಗರದಲ್ಲಿ 2 ತಿಂಗಳ ಹಿಂದೆ ಒಂದೇ ಕುಟುಂಬದ ಐದು ಮಂದಿ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು,ಮೀಟರ್ ಬಡ್ಡಿ ದಂಧೆಕೋರರ ದಬ್ಬಾಳಿಕೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಇನ್ನು ನಗರದಲ್ಲಿ ನಿರಂತರವಾಗಿ ಒಂದಲ್ಲ ಒಂದು ಮೀಟರ್ ಬಡ್ಡಿ ದಂಧೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆತ್ಮಹತ್ಯೆಗೆ ಯತ್ನಿಸಿದ ನಜರಾಬಾದ್ ಬಡಾವಣೆಯ ನಿವಾಸಿ ಅಝಮ್ ಪಾಷಾ, ಖಾಸಗಿಯಾಗಿ ಕೈಸಾಲವನ್ನು ಪಡೆದಿದ್ದು ಮರು ಪಾವತಿಸಲಾರದೇ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಮೀಟರ್ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..