ಮಂಗಳೂರು:- ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿ ಬಂಡುಕೋರರ ದಾಳಿ ನಡೆದಿದ್ದು, ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.
ಇಸ್ರೇಲ್ ಪರವಾಗಿ ನಿಂತ ದೇಶದ ಸರಕು ಸಾಗಾಣೆ ಹಡಗುಗಳು ಸಾಗುವಾಗ ದಾಳಿ ಮಾಡ್ತಿದ್ದಾರೆ. ಇದರಿಂದ ಆಮದು ಮತ್ತು ರಫ್ತನ್ನು ನಂಬಿಕೊಂಡ ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತ ಬೀಳುತ್ತಿದೆ.
ರಾಜ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಗೇರುಬೀಜ ಸಂಸ್ಕರಣಾ ಘಟಕಗಳಿವೆ. ಅದರಲ್ಲಿ 320ಕ್ಕೂ ಹೆಚ್ಚು ಫ್ಯಾಕ್ಟರಿಗಳು ಕರಾವಳಿಯಲ್ಲಿದೆ. ಈ ಫಾಕ್ಟರಿಗಳಿಗೆ ಹೆಚ್ಚಾಗಿ ಕಚ್ಚಾ ಗೇರುಬೀಜ ಬರುವುದು ಆಫ್ರಿಕಾ ಖಂಡದಿಂದ. ಆದರೆ ಇದೀಗ ಹೌತಿ ಬಂಡುಕೋರರ ದಾಳಿಯಿಂದ ಹಡಗಿನ ಸಂಚಾರದಲ್ಲಿ ವ್ಯತ್ಯಯ ಆಗಿ ಆಫ್ರಿಕಾದಿಂದ ಕಚ್ಚಾ ಗೋಡಂಬಿ ಬಾರದೆ ತೊಂದರೆಯಾಗುತ್ತಿದೆ.
ಸುತ್ತು ಬಳಸಿ ಹೆಚ್ಚುವರಿ 6,300 ನಾಟಿಕಲ್ ಮೈಲುಗಳ ಸಂಚಾರ ಮಾಡಿ ಬಂದರೆ 15 ಹೆಚ್ಚುವರಿ ದಿನಗಳ ಪ್ರಯಾಣ ಮಾಡಬೇಕಾಗಿದೆ. ಇದರ ಜೊತೆ ಪ್ರತಿ ಕಂಟೇನರ್ ಸಾಗಾಟ ದರ 2,000 ಡಾಲರ್ಗಿಂತ ಹೆಚ್ಚಾಗಿದ್ದು, ಈ ಏರಿಕೆ ಗೇರು ಉದ್ಯಮಕ್ಕೆ ತಲೆನೋವಾಗಿದೆ.
ಆಮದು ಮಾಡಿದ ಗೇರುಬೀಜಗಳನ್ನು ಫಾಕ್ಟರಿಯಲ್ಲಿ ವಿವಿಧ ಹಂತಗಳ ಮೂಲಕ ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಗೋಡಂಬಿಯನ್ನು ಯುರೋಪ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹಡಗಿನ ಮೂಲಕವೇ ರಫ್ತು ಮಾಡಲಾಗುತ್ತದೆ. ಆದರೆ ಇದೀಗ ಆಮದಿನ ಜೊತೆ ರಫ್ತು ಮಾಡುವುದಕ್ಕೂ ಕಷ್ಟ ಸಾಧ್ಯವಾಗುತ್ತಿದೆ.
ಕರಾವಳಿಯಲ್ಲಿರುವ ಕೆಲವೇ ಕೆಲವು ಸಾಂಪ್ರದಾಯಿಕ ಉದ್ಯಮಗಳಲ್ಲಿ ಈ ಗೇರು ಉದ್ಯಮವು ಒಂದು. ಆದರೆ ಕೋವಿಡ್ ಬಳಿಕ ಒಂದೊಂದು ಕಾರಣದಿಂದ ಉದ್ಯಮ ನಡೆಸುವುದೇ ಸವಲಾಗುತ್ತಿದ್ದು ರಾಜ್ಯ, ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಗೇರು ಉದ್ಯಮಿಗಳು ಒತ್ತಾಯಿಸಿದ್ದಾರೆ. ಸದ್ಯ ಬಂಡುಕೋರರ ದಾಳಿಯಿಂದಲು ಗೇರು ಉದ್ಯಮ ಬಡವಾಗುತ್ತಿದ್ದು ಮುಂದೇನಾಗುತ್ತೆ ಎಂದು ಕಾದುನೋಡಬೇಕಿದೆ.