ನವದೆಹಲಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದೇ ಕರೆಸಿಕೊಳ್ಳುತ್ತಿರುವ ಲಲಿತ್ ಝಾ (Lalit Jha) ಹೆಚ್ಚಿನ ವಿಚಾರಣೆಗೆ ಏಳು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಲಲಿತ್ ಝಾನನ್ನು ಶುಕ್ರವಾರ ಪಟಿಯಾಲ ಕೋರ್ಟ್ (Patiala Court) ಮುಂದೆ ಹಾಜರುಪಡಿಸಲಾಯಿತು, ಘಟನೆಯ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹದಿನೈದು ದಿನಗಳ ಸಮಯಬೇಕು ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು.
ಘಟನೆಯ ವಿವರ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಇಂದು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ ಝಾನನ್ನು ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಏಳು ದಿನಗಳ ಪೊಲೀಸ್ ಕಸ್ಟಡಿಗೆ (Police Custody) ನೀಡುವುದಾಗಿ ಹೇಳಿದರು
ಘಟನೆಯ ಬಳಿಕ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಲಲಿತ್ ಝಾ ಗುರುವಾರ ರಾತ್ರಿ ಏಕಾಏಕಿ ಕರ್ತವ್ಯಪಥ್ ಪೊಲೀಸ್ ಠಾಣೆಗೆ ಬಂದು ಶರಣಾದನು. ಆತನನ್ನು ಬಂಧಿಸಿದ ಪೊಲೀಸರು ಪ್ರಕರಣ ತನಿಖೆ ನಡೆಸುತಿರುವ ಸ್ಪೇಷಲ್ ಟೀಂಗೆ ಹಸ್ತಾಂತರ ಮಾಡಿದರು. ಶನಿವಾರ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಸಬ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿದರು.