ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಸೇರಿದ ಸುಮಾರು 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಏ.18ರಂದು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಆಸ್ತಿಯಲ್ಲಿ ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿದೆ. ಇಡಿ ದಾಳಿ ಬಳಿಕ ರಾಜ್ ಕುಂದ್ರಾ–ಶಿಲ್ಪಾ ಶೆಟ್ಟಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಿಮಗೆ ಅಗೌರವ ತೋರುತ್ತಿರುವಾಗಲೂ ಶಾಂತವಾಗಿ ಇರುವುದನ್ನು ಕಲಿಯುವುದು ಒಂದು ಬೇರೆ ರೀತಿಯ ಬೆಳವಣಿಗೆ ಎಂದು ರಾಜ್ ಕುಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಡಿ ದಾಳಿ ಮಾಡಿದ ಬಳಿಕ ಅವರ ಕಡೆಯಿಂದ ಬಂದಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ. ಸಾಯಿ ಬಾಬ ದೇವರ ಫೋಟೋ ಶೇರ್ ಮಾಡಿ ದೇವರಿಗೆ ಶರಣು ಎಂಬರ್ಥದಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ ಇಡಿ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿಯಾದ ಆಸ್ತಿಗಳಳ್ಲಿ ಪುಣೆಯಲ್ಲಿರುವ ಬಂಗ್ಲೆ, ಫ್ಲಾಟ್ ಹಾಗೂ ಇಕ್ವಿಟಿ ಷೇರು ಕೂಡ ಹೊಂದಿವೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಸ್ಥೆಯ ಮೂಲಕ ಅಮಿತ್ ಭಾರದ್ವಾಜ್, ವಿವೇಕ್, ಅಜಯ್, ಮಹೇಂದರ್ ಹೀಗೆ ಹಲವಾರು ಏಜೆಂಟರ್ ಗಳು ಬಿಟ್ ಕಾಯಿನ್ ರೂಪದಲ್ಲಿ 2017ರಲ್ಲಿ 6,600 ಕೋಟಿ ರೂ. ಹಣ ಸಂಗ್ರಹಿಸಿದ್ದರು. ಇವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.