ಮಂಡ್ಯ :– ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಮೂಲಕ ಅಭಿವೃದ್ದಿ ಕಾರ್ಯಗಳೊಂದಿಗೆ ನಾವು ನೀಡಿದ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಆತಗೂರು ಹೋಬಳಿಯ ಹನುಮಂತಪುರ ಗ್ರಾಮದಲ್ಲಿ 6 ಕೋಟಿ 80 ಲಕ್ಷ ರೂ ವೆಚ್ಚದಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳ ವಿದ್ಯುದೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಬಳಿಕ ಶಾಸಕ ಕೆ.ಎಂ.ಉದಯ್ ಮಾತನಾಡಿ, ಬರಪೀಡಿತ ಹೋಬಳಿ ಎಂದೆ ಹಣೆಪಟ್ಟಿ ಕಟ್ಟಿಕೊಂಡಿರುವ ಆತಗೂರು ಹೋಬಳಿಯನ್ನು ಇನ್ನು ಕೆಲ ದಿನಗಳಲ್ಲೇ ಆ ಹೆಸರನ್ನು ಕಳಚಲಾಗುವುದು ಎಂದರು.
ಈ ಬಾರಿ ನಿರೀಕ್ಷೆಯಂತೆ ಮಳೆ ಬಂದಿದ್ದರೆ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಬೇಸಿಗೆಗೆ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಮಳೆ ಅಭಾವದಿಂದ ಶಿಂಷಾ ನದಿಯೇ ಬತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿರುವ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಜೇಷ್ಠತೆ ಆಧಾರದ ಮೇಲೆ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗುತ್ತಿದ್ದು, ರೈತರ ಪಂಪ್ ಸೆಟ್ ಗಳ ಮೂಲಕ ಬೆಳೆಗಳನ್ನು ರಕ್ಷಿಸಿಕೊಳ್ಳಲೆಂದು ಪಂಪ್ ಸೆಟ್ ಗಳಿಗೆ ವಿದ್ಯುದೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
6 ಕೋಟಿ 80 ಲಕ್ಷ ರೂ ವೆಚ್ಚದಲ್ಲಿ 900 ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗುತ್ತಿದ್ದು, 500 ಪಂಪ್ ಸೆಟ್ ಗಳಿಗೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವ ಮೂಲಕ ರೈತರ ಬೆಳೆಗಳ ರಕ್ಷಣೆಗೆ ಮುಂದಾಗಲಾಗುವುದು ಎಂದರು.
ಆತಗೂರು ಹೋಬಳಿಯಲ್ಲಿ ಶಾಶ್ವತವಾದ ನೀರಾವರಿ ಯೋಜನೆಯನ್ನು ರೂಪಿಸದ ಕಾರಣ ಬೇಸಿಗೆಯಲ್ಲಿ ಈ ಭಾಗದ ರೈತರ ಕೊಳವೆ ಭಾವಿಗಳ, ಕೆರೆ ಕಟ್ಟೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಮಳೆಯನ್ನು ನಂಬಿಕೊಂಡು ಬೇಸಾಯ ಮಾಡುತ್ತಿರುವ ರೈತರು ಮಳೆ ಬಾರದ ಸಂದರ್ಭದಲ್ಲಿ ಬೆಳೆದ ಬೆಳೆಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಸೋಮನಹಳ್ಳಿ ಬಳಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಟೆಂಡರ್ ಗೆ ಅನುಮೋದನೆ ಸಿಗಲಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮನ್ ಮಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಸೆಸ್ಕಾಂ ಇಇ ಶಿವಕುಮಾರ್, ಅಭಿಯಂತರರಾದ ರಮೇಶ್, ಮೋಹನ್, ಪ್ರದೀಪ್, ಮುಖಂಡರಾದ ಗೋವಿಂದ, ಅಶೋಕ್, ರಮೇಶ್, ಪೂರಸಭಾ ಮಾಜಿ ಸದಸ್ಯ ಡಾಬಾ ಮಹೇಶ್, ಮಹಾಲಿಂಗು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ