ಬೆಂಗಳೂರು/ನವದೆಹಲಿ:- ಇನ್ಮುಂದೆ ಮದ್ವೆಯಾಗದ ಜೋಡಿಗೆ ಓಯೋ ರೂಮ್ ಎಂಟ್ರಿ ಇಲ್ಲ ಎಂದು ಹೇಳಲಾಗಿದೆ. ಅವಿವಾಹಿತ ಪುರುಷ ಮಹಿಳಾ ಜೋಡಿಗೆ ಹೋಟೆಲ್ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಪ್ರಕಟಿಸಿದೆ.
ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್ ಬುಕ್ಕಿಂಗ್ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್ಇನ್ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ. ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.
ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್ನಲ್ಲಿರುವ ತನ್ನ ಪಾಲುದಾರ ಹೋಟೆಲ್ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು.
ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್ ಏರ್ಪಡಿಸುವುದು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಖಿಲ ಭಾರತ ಮಟ್ಟದಲ್ಲಿ ಓಯೋ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.
ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮಗಳನ್ನು ಎತ್ತಿಹಿಡಿಯಲು ಓಯೋ ಬದ್ಧವಾಗಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಮಧ್ಯೆ ನಾವು ಕಾರ್ಯನಿರ್ವಹಿಸುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜಗಳ ಬೇಡಿಕೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಪರಿಶೀಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿದಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥರು ತಿಳಿಸಿದ್ದಾರೆ.