ಇಡೀ ದಿನ ಕುಳಿತುಕೊಳ್ಳುವುದರಿಂದ, ಬೆನ್ನಿನ ಮೇಲೆ ಭಾರ ಹೊರುವುದರಿಂದ, ಕೈಗಳಿಗೆ ಹೆಚ್ಚು ಕೆಲಸವಾದಾಗ ಕುತ್ತಿಗೆ ನೋವು ಕಾಡುತ್ತದೆ. ಪ್ರತೀ ಸಲ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗದುಕೊಳ್ಳುವುದು ಒಳ್ಳೆಯದಲ್ಲ. ಪದೇ ಪದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಅಪಾಯವಾಗುತ್ತದೆ. ಆದ್ದರಿಂದ ದೇಹದಲ್ಲಿನ ವಿವಿಧ ಭಾಗಗಳ ನೋವನ್ನು ನಿವಾರಿಸಲು ಮನೆಮದ್ದುಗಳನ್ನು ಮಾಡುವುದು ಒಳ್ಳೆಯದು. ಹಾಗಾದರೆ ಕುತ್ತಿಗೆ ನೋವು ಬಂದಾಗ ಯಾವ ರೀತಿಯಲ್ಲಿ ಶಮನ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ನೋಡೋಣ.
ಭಂಗಿ
ಮೊದಲಿಗೆ ಕುಳಿತುಕೊಳ್ಳುವ, ಮಲಗುವ ಭಂಗಿಗಳ ಬಗ್ಗೆ ಗಮನ ಕೊಡಿ. ದಿನವಿಡೀ ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಾಗಿದ್ದರೆ ಕಣ್ಣಿನ ಮಟ್ಟಕ್ಕೇ ಪರದೆ ಇರಿಸಿಕೊಳ್ಳಿ. ಭುಜಗಳನ್ನು ನಿರಾಳವಾಗಿ ಇರಿಸಿಕೊಳ್ಳಿ. ಕೂರುವ ಕುರ್ಚಿ ನಿಮ್ಮ ಎತ್ತರಕ್ಕೆ ಸರಿಯಾಗಿರಲಿ. ಮಲಗುವಾಗಲೂ ಸರಿಯಾಗ ಭಂಗಿಗಳು ಅಗತ್ಯ. ಬೆನ್ನು, ಕುತ್ತಿಗೆ ನೋವಿನ ಸಂದರ್ಭಗಳಲ್ಲಿ ಸೂಕ್ತ ಎತ್ತರದ ದಿಂಬುಗಳಿರಲಿ.
ಸ್ಟ್ರೆಚ್ ಮಾಡಿ
ತಾಸುಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಸರಿಯಲ್ಲ. ಇದರಿಂದ ಸ್ನಾಯುಗಳ ಮೇಲಿನ ಒತ್ತಡ ದ್ವಿಗುಣಗೊಳ್ಳುತ್ತದೆ. ಸದಾ ಒಂದೇ ಭಂಗಿಯಲ್ಲಿ ಕೂರುವ ಬದಲು ತಾಸಿಗೊಮ್ಮೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ. ಬೆನ್ನು, ಕುತ್ತಿಗೆ ಮತ್ತು ತೋಳುಗಳನ್ನು ಚೆನ್ನಾಗಿ ಸ್ಟ್ರೆಚ್ ಮಾಡಿ. ಇದರಿಂದ ನೋವು ಹೆಚ್ಚಾಗುವುದನ್ನು ತಡೆಯಬಹುದು.
ತೂಕ ಎತ್ತದಿರಿ
ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೆ, ತೂಕ ಎತ್ತುವ ಸಾಹಸಕ್ಕೆ ಕೈ ಹಾಕಬೇಡಿ. ಹೀಗೆಂದರೆ ಜಿಮ್ಗೆ ಹೋಗಿ ತೂಕ ಎತ್ತುವವರಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದು ಭಾವಿಸುವಂತಿಲ್ಲ. ಮನೆಯಲ್ಲೇ ಗ್ರೈಂಡರ್ ಎತ್ತುವುದು, ಮಂಚ, ಕುರ್ಚಿ-ಮೇಜುಗಳನ್ನು ಜರುಗಿಸುವುದು- ಇಂಥವೆಲ್ಲ ಬೆನ್ನು ಮತ್ತು ಕುತ್ತಿಗೆಯ ಮೇಲೆ ಒತ್ತಡ ಹೆಚ್ಚಿಸುತ್ತವೆ.
ದಿಂಬು
ಮಲಗುವಾಗ ಹಾಕುವ ದಿಂಬಿನ ಎತ್ತರದ ಬಗ್ಗೆ ಗಮನ ನೀಡಿ. ತೀರಾ ಎತ್ತರದ ದಿಂಬು ಮತ್ತು ದಿಂಬೇ ಇಲ್ಲದಿರುವುದು- ಈ ಎರಡೂ ವಿಷಯಗಳು ಕುತ್ತಿಗೆ ನೋವನ್ನು ಹೆಚ್ಚಿಸುತ್ತವೆ. ಮೆಮರಿ ಫೋಮ್ ದಿಂಬುಗಳು ಕುತ್ತಿಗೆ ನೋವಿನ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಖರೀದಿಸುವಾಗ ದುಬಾರಿ ಎನಿಸಿದರೂ, ನಿಮ್ಮ ಕುತ್ತಿಗೆಯ ಆರೋಗ್ಯಕ್ಕಾಗಿ ಇದೇನು ದೊಡ್ಡದೆನಿಸದು.
ಫಿಸಿಯೊಥೆರಪಿ
ಕುತ್ತಿಗೆ ನೋವಿಗೆ ಫಿಸಿಯೊಥೆರಪಿ ಉತ್ತಮ ಮದ್ದಾಗಬಲ್ಲದು. ಈ ಬಗ್ಗೆ ವೈದ್ಯರ ಸಲಹೆ ಕೇಳಿ ಮುಂದುವರಿಯುವುದು ಒಳ್ಳೆಯದು. ನೋವಿಗೆ ಕಾರಣವೇನೆಂದು ಪತ್ತೆ ಮಾಡಿ, ಅದಕ್ಕೆ ಸರಿ ಹೊಂದುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಜೊತೆಗೆ ವ್ಯಾಯಾಮ, ಮಸಾಜ್ ಮುಂತಾದವು ಬಿಗಿದ ಸ್ನಾಯುಗಳನ್ನು ಸಡಿಲ ಮಾಡುತ್ತದೆ.
ಬಿಸಿ-ತಣ್ಣಗಿನ ಪ್ಯಾಕ್
ಕುತ್ತಿಗೆಯ ಸ್ನಾಯುಗಳ ಬಿಗಿತ ಅಥವಾ ಉರಿಯೂತವನ್ನು ಶಮನ ಮಾಡುವುದಕ್ಕೆ ಬಿಸಿ ಇಲ್ಲವೇ ತಣ್ಣಗಿನ ಪ್ಯಾಕ್ಗಳು ಸಹಾಯ ಮಾಡುತ್ತವೆ. ಹೀಟಿಂಗ್ ಪ್ಯಾಡ್, ಬಿಸಿ ನೀರಿನ ಬಟ್ಟೆ ಮುಂತಾದವು ೧೫ ನಿಮಿಷಗಳ ಕುತ್ತಿಗೆಯ ಮೇಲಿದ್ದರೆ ಆರಾಮ ನೀಡಬಲ್ಲವು. ಪ್ರತಿಯಾಗಿ, ತಣ್ಣನೆಯ ಪ್ಯಾಡ್ ಅಥವಾ ತಣ್ಣೀರು ಬಟ್ಟೆಯೂ ಅನುಕೂಲವಾಗುತ್ತದೆ.
ಒತ್ತಡ ನಿರ್ವಹಣೆ
ಇದು ಎಲ್ಲಕ್ಕಿಂತ ಅತ್ಯಂತ ಮಹತ್ವದ್ದು. ಯೋಗ, ಪ್ರಾಣಾಯಾಮ, ದೀರ್ಘ ಉಸಿರಾಟ, ಧ್ಯಾನ, ಸಂಗೀತ ಕೇಳುವುದು ಅಥವಾ ಇನ್ಯಾವುದೇ ರೀತಿಯ ಒತ್ತಡ ನಿರ್ವಹಣೆಯ ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು.