ನಾವು ಸರಿಯಾದ ಸಮಯದಲ್ಲಿ ಮಲಗಿ ಸರಿಯಾದ ಸಮಯದಲ್ಲಿ ಎದ್ದೇಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಇದು ಉತ್ತಮ ನಿದ್ದೆಗೂ ಅವಶ್ಯ.
ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇರುವಷ್ಟು ನಿದ್ದೆ ಮಾಡದೇ ಇದ್ದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಆತಂಕದಂತಹ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ರಾತ್ರಿ ತಡವಾಗಿ ಮಲಗುವುದರಿಂದ ಮುಂಜಾನೆ ಸೂರ್ಯನ ಬೆಳಕು ನೋಡಲು ಆಗುವುದಿಲ್ಲ. ಮುಂಜಾನೆಯ ಎಳೆ ಬಿಸಿಲು ನಮ್ಮ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಆಂತರಿಕ ಗಡಿಯಾರವನ್ನು ಸಿಂಕ್ರೊನೈಸ್ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ನಿದ್ದೆಯ ಗುಣಮಟ್ಟದ ಸುಧಾರಣೆಗೂ ಸಹಕಾರಿ. ಹಾಗಾದ್ರೆ ತಡವಾಗಿ ನಿದ್ದೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
1. ಅರಿವಿನ ಸಾಮರ್ಥ್ಯ ಕುಗ್ಗುವುದು: ರಾತ್ರಿ ತಡವಾಗಿ ಮಲಗುವುದರಿಂದ ಇದು ನಮ್ಮ ನೆನಪಿನ ಶಕ್ತಿಯ ಪರಿಣಾಮ ಬೀರುತ್ತದೆ. ಗಮನಶಕ್ತಿ ಕುಗುತ್ತದೆ, ಅಲ್ಲದೆ ಉತ್ಪಾದಕತೆಯು ಕಡಿಮೆಯಾಗುತ್ತದೆ. ತಡವಾಗಿ ಹಾಗೂ ದಿನಕ್ಕೊಂದು ಸಮಯದಲ್ಲಿ ಮಲಗುವುದರಿಂದ ದೇಹ ನೈಸರ್ಗಿಕ ಚಕ್ರವು ಬದಲಾಗುತ್ತದೆ. ಇದು ನಿದ್ದೆ ಮಾಡುವುದು ಹಾಗೂ ಎಚ್ಚರಗೊಳ್ಳುವ ವಿಚಾರದಲ್ಲಿ ತೊಂದರೆ ಉಂಟು ಮಾಡುತ್ತದೆ. ಇದು ದೌರ್ಬಲ್ಯ, ಶಕ್ತಿಯ ಕೊರತೆ ಮತ್ತು ಹಗಲಿನಲ್ಲಿ ಏಕಾಗ್ರತೆಯ ತೊಂದರೆಗೆ ಕಾರಣವಾಗಬಹುದು.
2. ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ: ನಿದ್ದೆ ಕಡಿಮೆಯಾದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು, ಸೋಂಕಿನ ತೊಂದರೆ ಉಂಟಾಗುವುದು ಆಗಬಹುದು. ಉತ್ತಮ ನಿದ್ದೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
3. ತೂಕ ಹೆಚ್ಚಾಗುವುದು: ರಾತ್ರಿ ತಡವಾಗಿ ಊಟ ಮಾಡುವುದು, ನಿದ್ದೆಯ ಅಸಮತೋಲನವು ಹಸಿವು ಹೆಚ್ಚುವುದು, ಅನಾರೋಗ್ಯಕರ ಆಹಾರದ ಕಡುಬಯಕೆಗೆ ಕಾರಣವಾಗುತ್ತದೆ. ಹಾಗಾಗಿ ನಿದ್ದೆಯಲ್ಲಿನ ವ್ಯತ್ಯಾಸವು ಪರೋಕ್ಷವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
4. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ: ಮೊದಲೇ ತಿಳಿಸಿರುವಂತೆ ನಿದ್ದೆಯ ಕೊರತೆಯು ಬೊಜ್ಜು, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಅಪಾಯವನ್ನು ಹೆಚ್ಚಿಸುತ್ತದೆ.
5 ಮೂಡ್ ಸ್ವಿಂಗ್: ನಿದ್ದೆಯ ಕೊರತೆಯು ಕಿರಿಕಿರಿ, ಮೂಡ್ ಸ್ವಿಂಗ್, ಒತ್ತಡದ ಪ್ರಮಾಣ ಹೆಚ್ಚುವುದು, ಖಿನ್ನತೆ ಹಾಗೂ ಆತಂಕದಂತಹ ಮಾನಸಿಕ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ.
6. ದೈಹಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ: ತಡವಾಗಿ ಮಲಗುವುದು ದೈಹಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಅಪಾಯ ಉಂಟಾಗಬಹುದು.
7. ಚರ್ಮದ ಸಮಸ್ಯೆ: ನಿದ್ದೆಯ ಕೊರತೆಯಿಂದ ಚರ್ಮದ ಸಮಸ್ಯೆಗಳಾದ ಚರ್ಮ ಮಂದವಾಗುವುದು, ಕಪ್ಪು ಕಲೆಗಳು ಉಂಟಾಗುವುದು, ಮೊಡವ ಮತ್ತು ಬೇಗನೆ ವಯಸ್ಸಾದಂತೆ ಕಾಣುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಸಾಕಷ್ಟು ಉತ್ತಮ ನಿದ್ದೆಯು ಚರ್ಮದ ಆರೋಗ್ಯ ಉತ್ತಮವಾಗಿರಲು ಸಹಕಾರಿ.
8. ಹಾರ್ಮೋನ್ನಲ್ಲಿ ವ್ಯತ್ಯಾಸ: ನಿದ್ರಾಹೀನತೆಯು ಹಸಿವು, ಚಯಾಪಚಯ ಮತ್ತು ಒತ್ತಡ ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣವಾಗಬಹುದು.
9. ಹಾರ್ಮೋನುಗಳಲ್ಲಿನ ಅಸಮತೋಲನ: ನಿದ್ದೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರಿಂದ ಒತ್ತಡ, ಹಸಿವು ಹೆಚ್ಚಬಹುದು. ದೇಹದ ಪ್ರತಿರಕ್ಷಣಾ ಕಾರ್ಯದಲ್ಲೂ ತೊಂದರೆ ಉಂಟಾಗಬಹುದು.