ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ ಹಲವು ಕಾಯಿಲೆಗಳನ್ನು ಅಂಟುವಂತೆ ಮಾಡುತ್ತದೆ. ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಅಧಿಕ ಬೊಜ್ಜಿನ ಸಮಸ್ಯೆಯಿಂದ ಟೈಪ್ 2 ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ನೋವಿನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಿರುವಾಗ ನಿಮ್ಮ ದೇಹದ ತೂಕ ನಿಯಂತ್ರಿಸುವುದು ಅವಶ್ಯಕ. ದೇಹದ ತೂಕ ಹೆಚ್ಚಕ್ಕೆ ಕಾರಣವಾಗುವ ಕೆಲವು ಲಕ್ಷಣಗಳು ಈ ಕೆಳಗಿನಂತಿವೆ.
ದೈನಂದಿನ ಕೆಲಸಕ್ಕೆ ತೊಂದರೆ
ನಿಮ್ಮ ಮನೆಯ ದೈನಂದಿನ ಕೆಲಸ ಮಾಡಲಿಕ್ಕೂ ಸುಸ್ತು ಅಥವಾ ಆಲಸ್ಯ ಉಂಟಾಗುತ್ತಿದೆ ಎಂದಾದರೆ ದೇಹದ ತೂಕ ಏರಿಕೆಯಾಗುತ್ತಿರಬಹುದು. ಯಾವಾಗಲೋ ಒಮ್ಮೆ ಹೀಗಾದರೆ ಚಿಂತೆಯಿಲ್ಲ, ದಿನವೂ ಆಲಸ್ಯವಾಗುತ್ತಿದ್ದರೆ ಎಚ್ಚೆತ್ತುಕೊಳ್ಳಿ. ಆಹಾರದ ಮೇಲೆ ನಿಗಾ ಇಡಲು ಆರಂಭಿಸಿ. ದೇಹದಲ್ಲಿ ಕೊಬ್ಬು ಜಮಾವಣೆಯಾದಾಗ ದೇಹದೊಳಗೆ ಇನ್ ಫ್ಲಮೇಷನ್ ಉಂಟಾಗಿ ಆಯಾಸವೆನಿಸುತ್ತದೆ.
ಕ್ರೇವಿಂಗ್ಸ್ ಹೆಚ್ಚಳ
ಸಿಹಿ ತಿನಿಸುಗಳನ್ನು ತಿನ್ನುವ ಬಯಕೆ ಹೆಚ್ಚಿದರೆ ಅಥವಾ ಪದೇ ಪದೆ ಹೆಚ್ಚು ಹಸಿವಾಗುತ್ತಿದ್ದರೆ ಅದು ಖಂಡಿತವಾಗಿ ತೂಕ ಹೆಚ್ಚುತ್ತಿರುವ ಲಕ್ಷಣ. ತೂಕ ಹೆಚ್ಚಿದಾಗ ಉದಾಸೀನತೆ ಉಂಟಾಗುತ್ತದೆ. ಆಗ ಹಸಿವಾಗುವುದು ಸಹ ಹೆಚ್ಚುತ್ತದೆ. ಉದ್ವೇಗವಾದಾಗ, ಉದಾಸೀನತೆಯಾದಾಗ ಅಡ್ರಿನಲ್ ಗ್ರಂಥಿಯಿಂದ ಕಾರ್ಟಿಸೋಲ್ (Cortisol) ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಹಸಿವು ಅಧಿಕವಾಗುತ್ತದೆ.
ಸಕ್ಕರೆ ಮಟ್ಟ, ಕೊಬ್ಬು ಹೆಚ್ಚಳ
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದು, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುವುದು ತೂಕ ಹೆಚ್ಚಿದಾಗ ಮಾತ್ರ. ಇದು ತೂಕ ಏರಿಕೆಯಾಗುತ್ತಿರುವ ಸ್ಪಷ್ಟ ಸಂದೇಶ. ಆಗ ಎಚ್ಚೆತ್ತುಕೊಳ್ಳದಿದ್ದರೆ ಮಧುಮೇಹ ಆರಂಭವಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ, ಹೊಟ್ಟೆಯ ಸುತ್ತಮುತ್ತ ಬೊಜ್ಜು ಉಂಟಾದಾಗ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ.
ಸೊಂಟದ ಸುತ್ತಳತೆಯಲ್ಲಿ ವೃದ್ಧಿ
ನಿಮ್ಮ ಡ್ರೆಸ್ ನಿಮಗೆ ಮೊದಲಿನಂತೆಯೇ ಸರಿಹೊಂದುತ್ತಿದ್ದರೆ ಓಕೆ. ಸ್ವಲ್ಪ ಟೈಟ್ ಆಗುತ್ತಿದೆ ಎಂದಾಗ ಗಮನಿಸಿ. ಇದು ನೀವು ತೂಕ ಹೆಚ್ಚಿರುವ ಲಕ್ಷಣ. ಜೀನ್ಸ್ ಧರಿಸುವಾಗ ಉಸಿರು ಬಿಗಿ ಹಿಡಿದು ಧರಿಸಬೇಕಾಗಿದ್ದರೆ ನಿಮ್ಮ ಸೊಂಟದ ಸುತ್ತಳತೆ ಹೆಚ್ಚಿದೆ ಎಂದರ್ಥ. ಸಾಮಾನ್ಯವಾಗಿ, ದೇಹದ ತೂಕ ಏರಿಕೆಯಾದಾಗ ಹೊಟ್ಟೆ, ಸೊಂಟದ ಸುತ್ತಮುತ್ತ ಕೊಬ್ಬು ಜಮಾವಣೆಯಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ದಿನವಿಡೀ ಕುಳಿತುಕೊಳ್ಳುವ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಅತಿ ಹೆಚ್ಚು.
ಕಾಲುಗಳಲ್ಲಿ ನೋವು
ನಡೆಯುವಾಗ ಕಾಲುಗಳಲ್ಲಿ ನೋವು ಕಂಡುಬಂದರೂ ತೂಕ ಏರಿಕೆಯಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಪಾದಗಳು, ಹಿಮ್ಮಡಿ, ಮಂಡಿ ಎಲ್ಲಾದರೂ ನೋವು ಉಂಟಾಗಬಹುದು. ದೇಹದ ತೂಕ ಏರಿದಾಗ ಕಾಲುಗಳ ಮೇಲೆ ಹೆಚ್ಚು ಭಾರ, ಒತ್ತಡ ಉಂಟಾಗಿ ನೋವು ಕಂಡುಬರುತ್ತದೆ.
ನಿದ್ರೆ ಸಮಸ್ಯೆ
ಬೊಜ್ಜು ಇರುವವರಿಗೆ ನಿದ್ರೆಯ ಸಮಸ್ಯೆ ಕಂಡುಬರಬಹುದು.
ಸ್ಟ್ರೆಚ್ ಮಾರ್ಕ್
ತೂಕ ಏರಿಕೆಯಾಗುತ್ತಿರುವಾಗ ಚರ್ಮದಲ್ಲೂ ಸೂಕ್ಷ್ಮವಾದ ಬದಲಾವಣೆ ಕಾಣುತ್ತದೆ. ಅಲ್ಲಲ್ಲಿ ಸಣ್ಣಗಿ ಊತ ಬಂದಂತೆ ಚರ್ಮ ಊದಿಕೊಳ್ಳುತ್ತದೆ. ಇದು ಮುಂದೆ ಸ್ಟ್ರೆಚ್ ಮಾರ್ಕ್ ಗೆ ಕಾರಣವಾಗುತ್ತದೆ. ಆದರೂ ಕೆಲವರಲ್ಲಿ ಚರ್ಮದಲ್ಲಿ ಬದಲಾವಣೆ ಕಾಣದೆಯೂ ಇರಬಹುದು.