ಬೆಂಗಳೂರು:- ಮೇಕೆದಾಟು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲ್ಯುಸಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಜುಲೈ 2023 ರಿಂದ ನವೆಂಬರ್ 2023 ರ ವರೆಗೆ 10.658 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.
ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC)/ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (CWMA) ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು, ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ, ಜಲವರ್ಷ 2023-24 ಆರಂಭದಿಂದಲೂ ಸಂಕಷ್ಟ ಜಲ ವರ್ಷವಾಗಿದೆ. CWRC ಹಾಗೂ CWMA ಸಭೆಗಳಲ್ಲಿ ಕಾವೇರಿ ಜಲಾನಯನಗಳ ಜಲಾಶಯಗಳಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು, ಕಾಲಕಾಲಕ್ಕೆ ಉಂಟಾದ ಮಳೆಯ ಪ್ರಮಾಣ/ಕೊರತೆ, ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಶೇಖರಣೆ ಒಳಹರಿವು/ಹೊರಹರಿವಿನ ಪರಿಸ್ಥಿತಿ, ಹವಾಮಾನ ವಸ್ತುಸ್ಥಿತಿ, ಮಳೆಯ ಮುನ್ಸೂಚನೆ, ರಾಜ್ಯಗಳಲ್ಲಿನ ಬೆಳೆ ಪ್ರದೇಶ, ನಿಂತ ಬೆಳೆಗಳ ಪರಿಸ್ಥಿತಿ, ಕುಡಿಯುವ ನೀರಿನ ಹಾಗೂ ಕೈಗಾರಿಕಾ ಅವಶ್ಯಕತೆಗಳು, ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕಿದೆ. ರಾಜ್ಯದ ಜಲಾಶಯಗಳಲ್ಲಿನ ಒಳಹರಿವಿನ ಕೊರತೆಯನ್ನು ಪರಿಗಣಿಸಿ ಅಂತರ ರಾಜ್ಯ ಗಡಿಯಲ್ಲಿರುವ CWC ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ವಿವರಣೆ ನೀಡಿದರು.