ಬೆಂಗಳೂರು:- ಮೂವರು ಡಿಸಿಎಂಗಳ ನೇಮಕ ಸುಳ್ಳು ಸುದ್ದಿ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ನೇಮಕದ ಬಗ್ಗೆ ಸಚಿವರು ವೈಯಕ್ತಿಕ ಅಭಿಪ್ರಾಯವನ್ನು ಹೇಳಿರುತ್ತಾರೆ. ರಾಜಣ್ಣ ಅವರ ಹೇಳಿಕೆಯೂ ಅಷ್ಟೆ. ಅವರ ದೃಷ್ಟಿಯಲ್ಲಿ ಒಳ್ಳೆಯದು ಇರಬಹುದು. ಹೀಗಾಗಿ ಹೇಳಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ ಎಂದರು.
ಮೂವರು ಡಿಸಿಎಂಗಳ ನೇಮಕ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಪ್ರಭಾವ ಕುಗ್ಗಿಸಲು ಮೂವರು ಡಿಸಿಎಂಗಳ ನೇಮಕ ಮಾಡಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿದೆ. ಡಿಸಿಎಂ ಸ್ಥಾನಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರೂ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಪರಮೇಶ್ವರ್ ಅವರು ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಸಚಿವರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ಒಬ್ಬೊಬ್ಬರು ಒಂದೊಂದು ಕಾರಣ ಇಟ್ಟುಕೊಂಡು ದೆಹಲಿಗೆ ಹೋಗುತ್ತಾರೆ. ಈ ವೇಳೆ ಪಕ್ಷದ ಮುಖ್ಯ ಕಚೇರಿಗೆ ಹೋಗಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡುವುದು, ಸಾಧ್ಯವಾದರೆ ಅಧ್ಯಕ್ಷರ ಜತೆ ಚರ್ಚಿಸುತ್ತಾರೆ. ಆಡಳಿತದಲ್ಲಿರುವಾಗ ಪಕ್ಷದ ಹೈಕಮಾಂಡ್ ಸಲಹೆಗಳನ್ನು ಸ್ವೀಕರಿಸಬೇಕು. ಇದೆಲ್ಲ ಸಾಮಾನ್ಯವಾಗಿ ನಡೆಯುವ ಬೆಳವಣಿಗೆ. ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.