ಬಾಗಲಕೋಟೆ :- ಕಂದಾಯ ವಿಭಾಗಕ್ಕೆ ಒಬ್ಬರಂತೆ ಮುಖ್ಯಮಂತ್ರಿ ನೇಮಿಸಿಬಿಡಲಿ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ನಾಲ್ಕೈದು ಜನ ಸಿಎಂ ಆಕಾಂಕ್ಷಿಗಳು ಇದ್ದಾರೆ. ಅದಕ್ಕೆ ಕಾಂಗ್ರೆಸ್ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡಲಿ. ಹೇಗಿದ್ದರೂ ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ. ನಾಲ್ಕೂ ಕಂದಾಯ ವಿಭಾಗಕ್ಕೆ ಒಬ್ಬರಂತೆ ಮುಖ್ಯಮಂತ್ರಿ ನೇಮಿಸಿಬಿಡಲಿ ಎಂದರು.
ಕಾಂಗ್ರೆಸ್ನಲ್ಲಿ ನಾಲ್ಕು ಗುಂಪುಗಳಾಗಿವೆ. ಸಿದ್ದರಾಮಯ್ಯನವರದ್ದು ಅಹಿಂದ ಗುಂಪು, ಡಿಕೆ ಶಿವಕುಮಾರದ್ದು ಗೌಡರ ಗುಂಪು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಮಹಾದೇವಪ್ಪ ಅವರದ್ದು ಇನ್ನೊಂದು ಗುಂಪು, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರದ್ದು ಮತ್ತೊಂದು ಗುಂಪು. ಹೀಗಾಗಿ, ಕಾಂಗ್ರೆಸ್ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡುವುದು ಒಳಿತು ಎಂದು ಕಾರಜೋಳ ಕಾಂಗ್ರೆಸ್ನ ಕಾಲೆಳೆದರು.
ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂಬ ವಾಲ್ಮೀಕಿ ಸ್ವಾಮೀಜಿ ಹೇಳಿದ್ದು, ಒಂದು ಸಿಎಂ ಸ್ಥಾನ ಎಸ್ಸಿಗೆ ಇನ್ನೊಂದು ಎಸ್ಟಿಗೆ, ಒಂದು ಗೌಡ್ರಿಗೆ, ಒಂದು ಲಿಂಗಾಯತರಿಗೆ ಈ ರೀತಿ ಪಾಲು ಮಾಡಿಕೊಂಡು ನಾಲ್ಕು ಜನ ಮುಖ್ಯಮಂತ್ರಿಗಳನ್ನು ಮಾಡಿ, ನಾಲ್ಕು ಮಾಂಡಲೀಕರ ರೀತಿ ಆಡಳಿತ ನಡೆಸಿದರೆ ಪ್ರಾಯಶಃ ರಾಜ್ಯಕ್ಕೆ ಒಳ್ಳೆಯ ಆಡಳಿತ ಸಿಗಲಿದೆ ಎಂದು ಕಾರಜೋಳ ಹೇಳಿದರು.