ಬೆಂಗಳೂರು:- ನ್ಯಾ.ಡಿ ಕುನ್ಹಾಗೆ ಪ್ರಲ್ಹಾದ್ ಜೋಶಿ ಕ್ಷಮೆ ಕೇಳಿದ್ದು, ಈ ವಿಚಾರವಾಗಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ: ಶಾಸಕ ಯತ್ನಾಳ್
ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿಕುನ್ಹಾ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಇದೀಗ ಮೈಕೆಲ್ ಡಿ.ಕುನ್ಹಾ ಅವರಿಗೆ ನೇರವಾಗಿ ಪತ್ರ ಬರೆದು ಪ್ರಲ್ಹಾದ್ ಜೋಶಿ ಕ್ಷಮೆ ಕೇಳಿದ್ದಾರೆ.
ಈ ಹಿಂದೆ ರಾಜ್ಯ ವಿಧಾನಸಭೆ ಉಪ ಚುನಾವಣೆ ವೇಳೆ ಸಚಿವರು ಪ್ರಚಾರ ಭಾಷಣದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸುವಾಗ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ವರದಿ ಬಗ್ಗೆ ಪ್ರಸ್ತಾಪಿಸಿದ್ದು ವಿವಾದ ಹುಟ್ಟು ಹಾಕಿತ್ತು.
ಇದೀಗ ಈ ವಿಚಾರವಾಗಿ ಪ್ರಲ್ಹಾದ್ ಜೋಶಿ ಇದಕ್ಕೆ ಸ್ಪಷ್ಟನೆ ನೀಡಿದ್ದಲ್ಲದೆ, ವಾಸ್ತವದಲ್ಲಿ ತಾವೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ವಿವರಿಸಿ ನ್ಯಾಯಮೂರ್ತಿ ಕುನ್ಹಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ವಿವಾದಾತ್ಮಕ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನ್ಯಾಯಮೂರ್ತಿ ಮೈಕೆಲ್ ಡಿ’ ಕುನ್ಹಾ ಅವರಿಂದ ವರದಿ ತರಿಸಿಕೊಂಡಿದೆ ಎಂದು ಹೇಳಿದ್ದೇನೆ ಹೊರತು ತಮ್ಮ ಮೇಲೆ ಯಾವುದೇ ವೈಯಕ್ತಿಕ ಹೇಳಿಕೆ ನೀಡಿಲ್ಲ. ತಮಗೆ ಮತ್ತು ಆಯೋಗಕ್ಕೆ ಅಪಕೀರ್ತಿ ತರಲು ಅಥವಾ ಜನರ ಮನಸ್ಸಿನಲ್ಲಿ ನಿಮ್ಮ ಇಮೇಜ್ ಕಡಿಮೆ ಮಾಡುವ ಉದ್ದೇಶದ್ದೂ ಅಲ್ಲ ಎಂದಿದ್ದಾರೆ.
ಆಯೋಗದ ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಣೆ ಮತ್ತು ನಿಷ್ಪಕ್ಷಪಾತವನ್ನು ಅನುಮಾನಿಸಲು ನನಗೆ ಯಾವುದೇ ಕಾರಣವಿಲ್ಲ ಎಂಬುದನ್ನು ಈ ಮೂಲಕ ನೇರವಾಗಿ ತಮ್ಮ ಗಮನಕ್ಕೆ ತರಬಯಸಿದ್ದೇನೆ. ನನ್ನ ಹೇಳಿಕೆಗಳು ತಮಗೆ ಯಾವುದೇ ನೋವು ಅಥವಾ ಅನುಮಾನ ಉಂಟುಮಾಡಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.