ಅಕ್ಕಿನೇನಿ ನಾಗಾರ್ಜುನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯದಲ್ಲೇ ನಾಗಾರ್ಜುನ್ ಹಾಗೂ ಶೋಭಿತಾ ಹಸೆಮಣೆ ಏರಲಿದ್ದಾರೆ. ಈ ಮಧ್ಯೆ ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಎಂಗೇಜ್ ಮೆಂಟ್ ನಡೆದಿದೆ. ಈ ಮೂಲಕ ಕುಟುಂಬದಲ್ಲಿ ಬ್ಯಾಕ್ ಟು ಬ್ಯಾಕ್ ಖುಷಿ ಆರಂಭವಾಗಿದೆ.
ನಾಗಾರ್ಜುನ ಅವರ ಎರಡನೇ ಮಗ ಅಕ್ಕಿನೇನಿ ಅಖಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಲಾವಿದೆ ಝೈನಬ್ ರಾವ್ಡ್ಜೀ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಝೈನಬ್ ಹಾಗೂ ಅಖಿಲ್ ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಝೈನಬ್ ಚಿತ್ರಕಲಾವಿದೆ ಆಗಿದ್ದು ಭಾರತದ, ದುಬೈ, ಲಂಡನ್ ಇನ್ನಿತರೆ ಕಡೆಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಮಾಡಿದ್ದಾರೆ.
ಝೈನಬ್ ತಂದೆ ಝುಲ್ಫಿ ಅವರು ವಿಖ್ಯಾತ ಜೆಡ್ಆರ್ ಇನ್ಫ್ರಾ ಲಿಮಿಟೆಡ್ನ ಮಾಲೀಕರಾಗಿದ್ದಾರೆ. ದೇಶದ ಅತ್ಯುತ್ತಮ ಕನ್ಸ್ಟ್ರಕ್ಷನ್ ಸಂಸ್ಥೆಗಳಲ್ಲಿ ಒಂದಾಗಿದೆ ಜೆಡ್ಆರ್ ಇನ್ಫ್ರಾ ಲಿಮಿಟೆಡ್, ಝೈನಬ್ ಅವರ ಸಹೋದರ ಝೈನ್ ಅವರು ಜೆಡ್ ಆರ್ ರಿನೇವೆಬಲ್ಸ್ ಹೆಸರಿನ ಸೋಲಾರ್ ಶಕ್ತಿ ಸಂಸ್ಥೆಯೊಂದರ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ರಾವ್ಡ್ಜೀ ಕುಟುಂಬ ಆಂಧ್ರ-ತೆಲಂಗಾಣದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ.
ಅಂದಹಾಗೆ ಅಕ್ಕಿನೇನಿ ನಾಗಾರ್ಜುನಗೆ ಇದು ಎರಡನೇ ನಿಶ್ಚಿತಾರ್ಥ. 2017 ರಲ್ಲಿ ಶ್ರೆಯಾ ಭೂಪಾಲ್ ಹೆಸರಿನ ಯುವತಿಯೊಟ್ಟಿಗೆ ಅಖಿಲ್ ಅಕ್ಕಿನೇನಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜಿವಿಕೆ ರೆಡ್ಡಿಯವರ ಮೊಮ್ಮಗಳಾಗಿದ್ದ ಶ್ರೆಯಾ ಭೋಪಾಲ್ ಹಾಗೂ ಅಕ್ಕಿನೇನಿ ನಾಗಾರ್ಜುನ ನಿಶ್ಚಿತಾರ್ಥಕ್ಕೆ 700 ಕ್ಕೂ ಹೆಚ್ಚು ಮಂದಿ ಅತಿಥಿಗಳು ಆಗಮಿಸಿದ್ದರು. ಭಾರಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಆದರೆ ಆ ನಂತರ ಮದುವೆ ನಡೆಯಲಿಲ್ಲ.
ಇದೀಗ ಝೈನಬ್ ಜೊತೆಗೆ ಅತ್ಯಂತ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಕುಟುಂಬ ಸದಸ್ಯರು ಮಾತ್ರವೇ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಇನ್ನು ನಾಗಾರ್ಜುನ ಅವರ ಮೊದಲ ಪುತ್ರ ನಾಗ ಚೈತನ್ಯ ಸಹ ಶೋಭಿತಾ ಧುಲಿಪಾಲ ಜೊತೆಗೆ ತಿಂಗಳ ಹಿಂದಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ 05 ರಂದು ಅವರು ವಿವಾಹ ಆಗಲಿದ್ದಾರೆ. ಈ ಮಧ್ಯೆ ಕುಟುಂಬದಲ್ಲಿ ಮತ್ತೊಂದು ನಿಶ್ಚಿತಾರ್ಥ ನಡೆದಿದ್ದು ಈ ಮೂಲಕ ಅಕ್ಕಿನೇನಿ ಕುಟುಂಬದಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.