ಮಂಗಳೂರು:- ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್ಪ್ರೆಸ್ ಮಂಗಳೂರಿಗೂ ವಿಸ್ತರಣೆ ಮಾಡಲಾಗಿದೆ.
ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ, ವಂದೇ ಭಾರತ್ ರೈಲು ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06:15ಕ್ಕೆ ಹೊರಟು ಅಪರಾಹ್ನ 3:05ಕ್ಕೆ ತಿರುವನಂತಪುರಂ ಅನ್ನು ತಲುಪಲಿದೆ. ಹಾಗೆಯೇ ತಿರುವನಂತಪುರಂನಿಂದ ಸಂಜೆ 4:05ಕ್ಕೆ ಹೊರಟು ಮಂಗಳೂರನ್ನು ರಾತ್ರಿ 12:40ಕ್ಕೆ ತಲುಪಲಿದೆ.
ಬುಧವಾರ ಹೊರತು ಪಡಿಸಿ ವಾರದ 6 ದಿನಗಳೂ ವಂದೇ ಭಾರತ್ ರೈಲು ಸಂಚರಿಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav) ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.