ಬೆಳಗಾವಿ: ರಜೆ ಇದ್ದರೆ ಸಾಕು ಮಕ್ಕಳು ಒಂದಿಲ್ಲೊಂದು ಅವಾಂತರ ಮಾಡಿಕೊಳ್ಳುತ್ತಿರುತ್ತವೆ. ಇದೀಗ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ. ಗಣೇಶ ಹೀರಾಮಣಿ ಸುತಾರ್ (15) ಮೃತ ಬಾಲಕನಾಗಿದ್ದು,
ಮಂಗಳವಾರ ಶಾಲೆಗೆ ರಜೆಯಿದ್ದ ಕಾರಣ ಈಜಲು ಹೋಗಿದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಎಲ್ಲ ಕಡೆ ಹುಡುಕಾಟ ನಡೆಸಿದ್ದು, ಕೊನೆಗೆ ಕೆರೆಯ ಬಳಿ ಆತನ ಬಟ್ಟೆ ಕಂಡು ಬಂದಾಗ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರು ಕೂಡಲೇ ವಡಗಾಂವ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶವವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.