ಇಸ್ರೋದ ವಿಜ್ಞಾನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೆ ಇರುತ್ತಾರೆ. ಇದೀಗ ಅದಕ್ಕೆ ಮತ್ತೊಂದು ಪ್ರಯೋಗ ಸೇರಿಕೊಂಡಿದೆ. ಇತ್ತೀಚೆಗೆ ಪಿಎಸ್ಎಲ್ವಿ ಸಿ60 ನೌಕೆಯಲ್ಲಿಟ್ಟು ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಅಲಸಂದೆ ಬೀಜಗಳು ಅಲ್ಲಿ ಮೊಳಕೆಯೊಡೆದಿವೆ. ನೌಕೆಯ ಉಡ್ಡಯನದ ನಾಲ್ಕೇ ದಿನಗಳಲ್ಲಿ ಶೂನ್ಯ ಗುರುತ್ವದಲ್ಲಿ ಉಂಟಾದ ಈ ಬೆಳವಣಿಗೆ ವೈಜ್ಞಾನಿಕ ಲೋಕದಲ್ಲಿ ಕುತೂಹಲ ಮೂಡಿಸಿದೆ.
ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಕುರಿತು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಪ್ರಯೋಗದ ಭಾಗವಾಗಿ ಇಸ್ರೋ, ಒಟ್ಟು 8 ಅಲಸಂದೆ ಬೀಜಗಳನ್ನು ವಿಶೇಷ ವ್ಯವಸ್ಥೆಯೊಂದಿಗೆ ನೌಕೆಯಲ್ಲಿಟ್ಟು ಕಳುಹಿಸಿತ್ತು. ಶೂನ್ಯ ಗುರುತ್ವವಿರುವ ಪ್ರದೇಶದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವುದೇ ಇದರ ಉದ್ದೇಶವಾಗಿದೆ.
“ಬಾಹ್ಯಾಕಾಶದಲ್ಲಿ ಚಿಗುರೊಡೆದ ಜೀವ” ಎಂದು ಇಸ್ರೋ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಫೋಟೋ ಹಂಚಿಕೊಂಡಿದೆ. “ಬಾಹ್ಯಾಕಾಶದಲ್ಲಿ ಸಸ್ಯಗಳ ಅಧ್ಯಯನಕ್ಕಾಗಿ PSLV-C60ನ POEM-4 ಉಪಕರಣದಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಪ್ರಯೋಗದ ಭಾಗವಾಗಿ ಇಡಲಾಗಿದ್ದ ಅಲಸಂದೆ ಬೀಜ ಉಡ್ಡಯನದ ನಾಲ್ಕು ದಿನಗಳೊಳಗೆ ಚಿಗುರೊಡೆದಿದೆ. ಎಲೆಗಳನ್ನು ನಾವು ಶೀಘ್ರದಲ್ಲೇ ನಿರೀಕ್ಷಿಸುತ್ತಿದ್ದೇವೆ” ಎಂದು ಸಂಸ್ಥೆ ತಿಳಿಸಿದೆ.