ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಗಳು ಸಾಮಾನ್ಯ ಅನ್ನೋ ಹಾಗಾಗಿದೆ. ಅದರಲ್ಲೂ ಸೆಲೆಬ್ರಿಟಿಗಳು ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದು ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ. ಅಂತೆಯೇ ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ದು, ಶೀಘ್ರವೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬರ್ತಿದೆ.
ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗಿದ್ದು ವಿಚ್ಛೇದನ ಪ್ರಕ್ರಿಯೆಗಳು ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಷರತ್ತುಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಬ್ಬರು ದೂರ ದೂರವಾಗಲು ಯಾವುದೇ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ದಂಪತಿ ಪ್ರತ್ಯೇಕವಾಗಿ ತಮ್ಮ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ವದಂತಿಗೆ ಪೂರಕ ಎಂಬಂತೆ ಇಬ್ಬರೂ ಇನ್ಸ್ಟಾದಲ್ಲಿ ಅನ್ಫಾಲೋ ಮಾಡಿದ್ದಾರೆ. ಚಹಲ್ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದರೆ ಧನಶ್ರೀ ಚಹಲ್ ಅವರೊಂದಿಗೆ ಫೋಟೋ ಡಿಲೀಟ್ ಮಾಡಿದ್ದಾರೆ.
ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್ಗೆ ಮುಂದಾಗಿದ್ದಾರೆ ಎಂದು ಎರಡು ವರ್ಷದ ಹಿಂದೆ ಸುದ್ದಿ ಪ್ರಕಟವಾಗಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಕೊರೋನಾ ಕಾಲದ ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎಂದು ಧನ್ಯಶ್ರೀ ಹೇಳಿದ್ದರು.