ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದಾರೆ. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ನಿನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕಚೇರಿಗೆ ಟಿಡಿಪಿ ಕಾರ್ಯಕರ್ತರು ಮತ್ತು ಎನ್.ಟಿ.ಆರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಹೈದರಾಬಾದ್ ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ವ್ಯೂಹಂ ಸಿನಿಮಾದ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಆಗ ಸಿನಿಮಾಗಳ ಮೂಲಕ ಸಖತ್ ಸುದ್ದಿ ಆಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) , ಇದೀಗ ವಿವಾದಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ವರ್ಮಾ ‘ವ್ಯೂಹಂ’ (Vyuham) ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾಗೆ ಆಂಧ್ರದ ಟಿಡಿಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.