ಇಂದು ವರನಟ ಡಾ.ರಾಜ್ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಣ್ಣವ್ರ ಸ್ಮಾರಕಕ್ಕೆ ನಮಸಿದ್ದಾರೆ. ಇದೇ ವೇಳೆ ತಾವು ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ಅಣ್ಣಾವ್ರು ಧೈರ್ಯ ತುಂಬಿದ್ದರು ಎಂದು ಹಳೆಯ ದಿನಗಳನ್ನು ಜಗ್ಗೇಶ್ ಸ್ಮರಿಸಿದ್ದಾರೆ.
1994ರ ಸಮಯದಲ್ಲಿ ಜಗ್ಗೇಶ್ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ನನ್ನ ಪರ ನಿಂತಿದ್ದು ಅಣ್ಣಾವ್ರು ಎಂದಿದ್ದಾರೆ. ಆಗ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ, ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು. ಅಂದು ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಹಿಂಡಿದ್ದರು. ನನಗೆ ಮಾನಸಿಕವಾಗಿ ನನ್ನ ಜೊತೆ ನಿಂತರು. ಅವರ ಆಶೀರ್ವಾದದ ನಂತರ ನನ್ನ ಸಿನಿಮಾಗಳು ಮಾಸಿವ್ ಹಿಟ್ ಆದವು ಎಂದು ಅಣ್ಣಾವ್ರರನ್ನು ನೆನಪಿಸಿಕೊಂಡಿದ್ದಾರೆ ಜಗ್ಗೇಶ್.
ನಮ್ಮ ತಂದೆ ಮತ್ತು ರಾಜ್ಕುಮಾರ್ ಅವರ ಮೂಗು ಒಂದೇ ರೀತಿ ಇದೆ. ನನಗೆ ರಾಜಣ್ಣ ಅಂದ್ರೆ ಪಂಚಪ್ರಾಣ. ನಾನು ಅವರಲ್ಲಿ ತಂದೆಯ ವಾತ್ಸಲ್ಯ ಕಂಡೆ. ನಾನು ಹೊಸದಾಗಿ ಮನೆ ಕಟ್ಟಿದೀನಿ ಬರಬೇಕು ಎಂದೆ. ಬೆಳಿಗ್ಗೆ 11 ಗಂಟೆಗೆ ಬಂದರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ದರು. ಅನೇಕ ನೆನಪುಗಳು, ಒಡನಾಟ ಇವೆ. ರಾಜ್ಕುಮಾರ್ ಕೊನೆಯ ಜರ್ನಿಯಲ್ಲಿ ನಾನಿದ್ದೆ. ಅವರ ಮೃತದೇಹದ ಜೊತೆಗೆ ನಾನು ಇಡೀ ದಿನ ಇದ್ದೆ. ಅಂದು ಅವರನ್ನು ಮಣ್ಣಿಗೆ ಹಾಕುವಾಗ ನೋಡಲು ಆಗಲಿಲ್ಲ. ಚಿತ್ರರಂಗಕ್ಕೆ ನಮಗೆಲ್ಲಾ ರಾಜಮಾರ್ಗ ಹಾಕಿ ಕೊಟ್ಟರು ಎಂದು ಜಗ್ಗೇಶ್ ಹೇಳಿದ್ದಾರೆ.