ಭಾರತದ ನಂ.1 ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಗೆಳೆಯ ಮಿಲಿಂದ್ ಶರ್ಮಾ ಅವರನ್ನು ಸರಳ ಸಮಾರಂಭದಲ್ಲಿ ಅಂಕಿತಾ ರೈನಾ ವರಿಸಿದ್ದಾರೆ. ಅಂಕಿತಾ ಮತ್ತು ಮಿಲಿಂದ್ ವಿವಾಹವನ್ನು ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು 30 ವರ್ಷದ ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯ ನಮ್ಮಿಬ್ಬರನ್ನೂ ಇಲ್ಲಿಗೆ ಕರೆತಂದಿದೆ. ಜೋಡಿಯಾಗಿ ಹೊಸ ಪಯಣ ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಅಂಕಿತಾ ಬರೆದುಕೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಅಂಕಿತಾ ಮತ್ತು ಮಿಲಿಂದ್ ಅವರನ್ನು ಶ್ಲಾಘಿಸಿ ಹಲವು ಕಾಮೆಂಟ್ಗಳು ಬಂದಿವೆ. ಹೊಸ ಪಯಣ ಅದ್ಭುತವಾಗಿರಲಿ ಎಂದು ಹಾರೈಸಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ.
ಅಂಕಿತಾ ರೈನಾ 2018 ರಿಂದ ಟೆನಿಸ್ ಆಡುತ್ತಿದ್ದಾರೆ. ಅವರು ಕೆಲವು ಸಮಯದಿಂದ ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಂಕಿತಾ ಡಬ್ಲ್ಯುಟಿಎ ಟೂರ್ನಲ್ಲಿ ಒಂದು ಪ್ರಶಸ್ತಿ ಮತ್ತು ಡಬ್ಲ್ಯುಟಿಎ 125 ಟೂರ್ನಿಯಲ್ಲಿ ಒಂದು ಟ್ರೋಫಿ ಗೆದ್ದಿದ್ದಾರೆ. ಅಂತರಾಷ್ಟ್ರೀಯ ಟೆನಿಸ್ ಫೆಡರೇಷನ್ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಅಂಕಿತಾ ಸಿಂಗಲ್ಸ್ ನಲ್ಲಿ 11 ಟ್ರೋಫಿ ಹಾಗೂ ಡಬಲ್ಸ್ ನಲ್ಲಿ 25 ಟ್ರೋಫಿಗಳನ್ನು ಗೆದ್ದಿದ್ದಾರೆ. ಅದರೊಂದಿಗೆ ಫೆಡ್ ಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದಾರೆ.