ಒಂದೂ ಬೌಲ್ ಆಡದೇ ಏಂಜೆಲೊ ಮ್ಯಾಥ್ಯೂಸ್ ಔಟ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ರೀತಿಯಾಗಿರುವುದು ಇದೇ ಮೊದಲು. ಅವರು ಒಂದೂ ಎಸೆತ ಎದುರಿಸದೇ ಔಟ್ ಆದ ಬ್ಯಾಟರ್ ಕೂಡ ಅವರಾದರು
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 36 ವರ್ಷದ ಮ್ಯಾಥ್ಯೂಸ್ ಅವರು ಸದೀರ ಸಮರವಿಕ್ರಮ ಅವರು ಔಟಾದ ನಂತರ ಬ್ಯಾಟಿಂಗ್ ಮಾಡಬೇಕಿತ್ತು.
ಆರನೇ ಕ್ರಮಾಂಕದ ಬ್ಯಾಟರ್ ಮ್ಯಾಥ್ಯೂಸ್ ಪಿಚ್ನತ್ತ ಬಂದರು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್ನ ಪಟ್ಟಿ ಹರಿದಿದ್ದನ್ನು ಗಮನಿಸಿದರು. ಇನ್ನೊಂದು ಹೆಲ್ಮೆಟ್ ತರುವಂತೆ ಡಗ್ಔಟ್ನತ್ತ ಸಹ ಆಟಗಾರನಿಗೆ ಸನ್ನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ವೇಳೆ ಮೀರಿದ್ದನ್ನು ಗಮನಿಸಿದ ಬಾಂಗ್ಲಾ ಆಟಗಾರರು ಟೈಮ್ ಔಟ್ಗಾಗಿ ಮನವಿ ಸಲ್ಲಿಸಿದರು.
ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್ಗೆ ಬಂದು ಆಟ ಆರಂಭಿಸಬೇಕು ಎಂಬುದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (40.1.1) ನಿಯಮವಾಗಿದೆ. ಅಲ್ಲದೇ ನಿಯಮ 40.1.2ರ ಪ್ರಕಾರ, ಬ್ಯಾಟರ್ ಕ್ರೀಸ್ಗೆ ಬರುವಲ್ಲಿ ವಿಳಂಬವಾದರೆ ಅಂಪೈರ್ಗಳು 16.3ರ ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ.
ಅಂಪೈರ್ಗಳಾದ ಮರಾಯಿಸ್ ಎರಸ್ಮಸ್ ಮತ್ತು ರಿಚರ್ಡ್ ಇಲಿಂಗ್ವರ್ಥ್ ಅವರು ಏಂಜೆಲೊ ಮ್ಯಾಥ್ಯೂಸ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಈ ಸಂದರ್ಭದಲ್ಲಿ ಚಕಿತಗೊಂಡ ಮ್ಯಾಥ್ಯೂಸ್ ಮತ್ತು ಇನ್ನೊಂದು ಬದಿಯಲ್ಲಿದ್ದ ಚರಿತ ಅಸಲಂಕಾ ಅವರು ಅಂಪೈರ್ಗಳ ಜೊತೆಗೆ ವಾಗ್ವಾದ ನಡೆಸಿದರು. ಮ್ಯಾಥ್ಯೂಸ್ ಅವರು ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರೊಂದಿಗೆ ಕೂಡ ಮಾತುಕತೆ ನಡೆಸಿದರು. ತಮ್ಮ ಹೆಲ್ಮೆಟ್ನ ಪಟ್ಟಿ ಕಿತ್ತಿರುವುದನ್ನು ತೋರಿಸಿದರು. ಆದರೆ ಯಾವುದೂ ಫಲ ಕೊಡಲಿಲ್ಲ.
ಅಸಮಾಧಾನದಿಂದ ಕುದಿಯುತ್ತಲೇ ಮ್ಯಾಥ್ಯೂಸ್ ಹೊರನಡೆದರು. ಲಂಕಾ ತಂಡದ ಮೊತ್ತ 135 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ನಿಯಮದ ಪ್ರಕಾರಣ ಟೈಮ್ ಔಟ್ ವಿಕೆಟ್ ಅನ್ನು ಯಾವುದೇ ಬೌಲರ್ಗಳ ಖಾತೆಗೂ ಸೇರ್ಪಡೆ ಮಾಡಲಿಲ್ಲ. ಇಂತದೊಂದು ಘಟನೆಯು ದೇಶಿ ಕ್ರಿಕೆಟ್ನಲ್ಲಿ ದಾಖಲಾಗಿದೆ.