ಬೆಳಗಾವಿ: ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಹೂ ಕಿತ್ತರೂ ಎಂಬ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮನೆ ಮಾಲೀಕ ಸಹಾಯಕಿಯ ಮೂಗನ್ನೇ ಕಟ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮೀ ಹೇಬ್ಬಾಳ್ಕರ್ ಕ್ಷೇತ್ರದಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲೇ ಮೇಲಿಂದ ಮೇಲೆ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿ, ಹಲ್ಲೆ ನಡೆಸಿ ರಾಕ್ಷಸ ವರ್ತನೆ ತೋರಲಾಗಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಸುಗಂಧಾ ಮೋರೆ(50) ಎಂಬ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ನಡೆದಿದೆ. ಸುಂಗಧಾ ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಹೂ ಕಿತ್ತರೂ ಎಂಬ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿಯ ಮೂಗನ್ನೇ ಕಟ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ.
ಮೂಗು ಕತ್ತರಿಸಿರುವ ಹಿನ್ನೆಲೆ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಆಟವಾಡುತ್ತ ಅಂಗನವಾಡಿ ಪಕ್ಕದಲ್ಲೇ ಇರುವ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಮಲ್ಲಿಗೆ ಹೂ ಕಿತ್ತಿದ್ದರು. ಇದರಿಂದ ಕೋಪಗೊಂಡು ಅಂಗನವಾಡಿ ಸಹಾಯಕಿಗೆ ಮನೆ ಮಾಲೀಕ ಶಿಕ್ಷೆ ಕೊಟ್ಟಿದ್ದಾನೆ. ಮಕ್ಕಳು ಮಾಡಿದ ತಪ್ಪಿಗೆ ಸಹಾಯಕಿಗೆ ಮಹಿಳೆ ಅನ್ನೋದನ್ನೂ ಮರೆತು ಹಲ್ಲೆ ಮಾಡಲಾಗಿದೆ.
ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ದಿನೇ ದಿನೇ ರಾಕ್ಷಸಿ ವರ್ತನೆಯ ಕೃತ್ಯಗಳು ಹೆಚ್ಚುತ್ತಿವೆ. ಇನ್ನು ಮೂಗ ಗಂಡನೊಂದಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಕಟ್ಟಿಕೊಳ್ತಿದ್ದ ಮಹಿಳೆ ಈಗ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸುಗಂಧಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ವರೆಗೂ ಅರೋಪಿ ಕಲ್ಯಾಣಿಯನ್ನು ಪೊಲೀಸರು ಬಂಧಿಸಿಲ್ಲ.