ಮಂಗಳೂರು:- ಅನಂತ ಕುಮಾರ ಹೆಗಡೆ ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾಡಿನ ಪುರಾತನ ಮಸೀದಿಗಳನ್ನು ಒಡೆದು ಅಲ್ಲಿ ದೇವಸ್ಥಾನ ನಿರ್ಮಿಸುತ್ತೇವೆ ಎನ್ನುವ ಕೆನರಾ ಸಂಸದ ಅನಂತ ಕುಮಾರ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ ಎಂದರು.
ಅವರು ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು. ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ವ್ಯಕ್ತಿ ಅವರು. ಯಾವುದೇ ಪುಸ್ತಕದಲ್ಲಿ ಮಸೀದಿಗಳು ದೇವಸ್ಥಾನ ಆಗಿತ್ತು ಎಂದು ಉಲ್ಲೇಖ ಇಲ್ಲ. ಅವರಿಗೆ ತಲೆಗೆ ಬಂದಿದ್ದನ್ನು ಹೇಳಿಕೊಂಡು ಹೋಗುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ.
ಎಲ್ಲಿಯೂ ಇಲ್ಲದ ವಿಚಾರಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಎಲ್ಲಿಯೂ ಕಾಣಿಸದ ಅನಂತ ಕುಮಾರ್ ಹೆಗಡೆ ಈಗ ಚುನಾವಣೆ ಬರುತ್ತಿದ್ದಂತೆ ಶಾಂತಿ, ಸುವ್ಯವಸ್ಥೆ ಕದಡುವ ಮಾತನ್ನಾಡುತ್ತಿದ್ದಾರೆ. ಸರ್ಕಾರ ಸಮಾಜದ ಶಾಂತಿ ಕದಡಲು ಆಸ್ಪದ ನೀಡುವುದಿಲ್ಲ ಎಂದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಗೋಪಾಷ್ಟಮಿಗೂ ಕಾಂಗ್ರೆಸ್ ನಾಯಕರ ಸಾವಿಗೂ ಯಾವುದೇ ಸಂಬಂಧ ಇಲ್ಲ. ಕಾಗೆ ಕೂರೋದು, ಕೊಂಬೆ ಮುರಿಯೋದು ಎನ್ನುವ ಥರ ಅದೆಲ್ಲ ಕಾಕತಾಳೀಯ. ಈ ಕುರಿತ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದರು.