ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದ ಬಳಿ ಅಪರಿಚಿತ ವಾಹನ ಒಂದು ಜಿಂಕೆ ಮರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಸೊರಬ ತಾಲೂಕಿನ ಉಳವಿ ಗ್ರಾಮದಿಂದ ಶಿರಾಳಕೊಪ್ಪ ಹೋಗುವ ಮಾರ್ಗದಲ್ಲಿ ಇರುವ ದಟ್ಟ ಕಾಡಿನ ಸಮೀಪ ಜಿಂಕೆಮರಿ ಒಂದು ರಸ್ತೆಗೆ ಬಂದಿದ್ದು ಅದೇ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಜಿಂಕೆ ಮರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಜಿಂಕೆ ಮರಿಯ ಕಾಲಿಗೆ ತೀವ್ರವಾದ ಪೆಟ್ಟು ಬಿದ್ದಿತ್ತು.
ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಮಾಹಿತಿ ನೀಡಿ ಒಂದು ಗಂಟೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಜಿಂಕೆ ಮರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.